Saturday, January 22, 2011

ಮೌನ : ನಾ ಹುಡುಕ ಹೊರಟಾಗ

 ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು 
ಮೌನ ಹುಡುಕ ಹೊರಟೆ ನಾ ಈ ಸದ್ದು ತುಂಬಿದ ಲೋಕದೊಳು

ಸ್ವಾತಿ ಮಳೆಯ ಚಿಟಪಟ ಸದ್ದಿನಲ್ಲಿತ್ತು
ಪ್ರೀತಿ ತುಂಬಿದ ಅಮ್ಮನ ಕೈತುತ್ತಿನಲ್ಲಿತ್ತು
ಎಳೆ ಮಗು ಹಾಲೆಳೆಯುವ ಸದ್ದಿನಲ್ಲಿತ್ತು
ಎಲೆ ಉದುರಿರುವ ಶಿಶಿರದ ಬೋಳು ಮರದಲ್ಲಿತ್ತು

ಕೆರೆಯಲ್ಲಿ ಅರ್ದತುಂಬಿದ ಬಿಂದಿಗೆಯಲ್ಲಿತ್ತು
ಬಿಂದಿಗೆ ಹಿಡಿದ ನಲ್ಲೆ ಕೈಯಲ್ಲಿನ ಬಳೆಯಲ್ಲಿತ್ತು
ಅಂಗಳದಲ್ಲಿನ ಪುಟ್ಟ ಮಗುವಿನ ಗೆಜ್ಜೆಯಲ್ಲಿತ್ತು
ಬಯಲಾಟದ ದರ್ಪ ತುಂಬಿದ ಯಕ್ಷ ಹೆಜ್ಜೆಯಲ್ಲಿತ್ತು

ಹಾಲು ಕರೆಯುತಿದ್ದ ಆಕಳಿನ ಕೆಚ್ಚಲಿನಲ್ಲಿತ್ತು
ಮುಧು ಹೀರಿ ಹೊರಟ ಪತಂಗದ ರೆಕ್ಕೆಯಲ್ಲಿತ್ತು
ಹೊರ ಪ್ರಪಂಚಕೆ ಕಾಲಿಡಲು ಹಾತೊರೆಯುವ ಬಿರಿದ ಮೊಳಕೆಯಲ್ಲಿತ್ತು
ಪ್ರಶಾಂತ ಕಡಲೊಳು ಮುತ್ತಿಡುವ ಕೋಟಿಕೋಟಿ ಅಲೆಯಲ್ಲಿತ್ತು

ನಾ ಹುಡುಕ ಹೊರಟ ಮೌನ ಇನ್ನೂ ಸಿಕ್ಕಿಲ್ಲ
ಮೊದಲ ನೋಟದ ನಿನ್ನ ಕಣ್ಣ ರೆಪ್ಪೆಯ ಪಲ್ಲಟದಲ್ಲಿತ್ತು ಆ ಮೌನ
ನನ್ನ ಮೌನ ಮಾತಿಗೆ ವಿರಾಮ ಇಟ್ಟ ಆ ಮೌನ
ಅಂದು ನೀ ನನಗೆ ಕೊಟ್ಟ ಮೌನ ಉತ್ತರದಲ್ಲಿತ್ತು.

ನಿಮ್ಮ
ಕಾಮತ್ ಕುಂಬ್ಳೆ

No comments:

Post a Comment