ಒಂದೆಡೆ ನಿಂತಿರುವ ನೀರು ನಾನು
ಬೇರೆಡೆಗೆ ಹರಿಯುತ ಸಾಗಿದೆ ನೀನು
ಕೆರೆ ಸರೋವರ ಇಲ್ಲ ನಾ ಕಡಲೋ..
ತೊರೆ ಝರಿ ಇಲ್ಲ ನೀ ನದಿಯೋ ..
ಹರಿಯುವ ನೀರಾದರು ನೀನು
ಬಂದು ಸೇರುವೆ ಈ ಕಡಲು
ತಂಪಾದ ಶಶಿಯು ನಾನು
ಸುಡುವ ರವಿಯು ನೀನು
ನಾ ತಿರುಗಲು ಬಂದಿತು ಧ್ವಾದಶ ಮಾಸ
ನೀನಿರಲು ಬರುವುದು ನವ ವಸಂತ
ನನಗೆ ನೀನೆ ಬೆಳಕಾದರೂ
ಗ್ರಹಣಕೆ ನನ್ನಿಂದಲೇ ನೀ ಬರಿಯ ಕತ್ತಲು
ಹೊರಬಿಟ್ಟ ಬರಿಯ ಉಸಿರು ನಾನು
ಸರಿಗಮ ಮಿಡಿಯುವ ಕೊಳಲು ನೀನು
ಅಂತರಂಗದ ಮೌನ ಸ್ವರವೂ ನಾ
ಹೊರಬಂದ ಇಂಪಾದ ದನಿಯು ನೀ
ನನ್ನೀ ಉಸಿರ ಸ್ಪರ್ಶ ವಾಹದಿರಲು
ನೀನು ಬರಿಯ ಒಂದು ತುಂಡು ಬಿದಿರು
ಕಾಮತ್ ಕುಂಬ್ಳೆ
No comments:
Post a Comment