Tuesday, October 25, 2011

ನೆನಪಿನ ಬುತ್ತಿ :ದೀಪಾವಳಿನೆನಪಿನ ಬುತ್ತಿ :ದೀಪಾವಳಿಎಲ್ಲಾ ಓದುಗರಿಗೆ ದೀಪಾವಳಿಯ ಹಾರ್ಧಿಕ ಶುಭಾಷಯಗಳು

ದೀಪಾವಳಿ ಎಂದರೆ ಎಲ್ಲರಿಗೂ ಸಂಭ್ರಮ, ಈ ಹಬ್ಬಕ್ಕೆ ಮಾನವ, ಪ್ರಾಣಿ, ಗಿಡ-ಮರ,ನಿರ್ಜೀವ ವಸ್ತುಗಳು ಅಂತಿಲ್ಲ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ಹಬ್ಬ. ೩ ದಿನದ ಈ ಸಡಗರ ದಲ್ಲಿ ಎಲ್ಲವೂ ಭಾಗಿ ಆಗುತ್ತವೆ ಮತ್ತು ಸಂಭ್ರಮಿಸುತ್ತವೆ ,ನಂತರ ಬರುವ ವರುಷದ ನಿರೀಕ್ಷೆ ಶುರು ಮಾಡುತ್ತಾರೆ.ನಮ್ಮ ದೈನಂದಿನ ಕಾರ್ಯಗಳಲ್ಲಿ ನಮಗೆ ನೆರವಾಗುವ ಬಹುತೇಕ ಎಲ್ಲಾ ವಸ್ತುಗಳು ಪಾಲ್ಗೊಳ್ಳುತ್ತವೆ. ಮೊದಲ ದಿನದ ಹಂಡೆಗೆ ನೀರು ತುಂಬಿಸುವಾಗ ಹಚ್ಚಿದ ಪಟಾಕಿ ಸದ್ದು ಮುಂದಿನ ಕಾರ್ತಿಕ ಹುಣ್ಣಿಮೆ ವರೆಗೆ ಪ್ರತಿಧ್ವನಿಸುತ್ತಲೇ ಇರುವುದು..ಈ ಹಬ್ಬದಲ್ಲಿ ಅದೆಷ್ಟೋ ನೆನಪುಗಳಿವೆ, ಹಂಚಿ ಸಂಭ್ರಮಿಸೋಣ.
ಇಂದು ಅಂದರೆ ನರಕಚತುರ್ದಶಿಯ ಹಿಂದಿನ ದಿನ ಧನತ್ರಯೋದಶಿ' ದಿನ ಬಚ್ಚಲು ಮನೆಯನ್ನು ಶುಚಿ ಗೊಳಿಸುವುದರಿಂದ ನನ್ನ ಮತ್ತು ನನ್ನ ಅಕ್ಕನ ಬಾಲ್ಯದ ದೀಪಾವಳಿ ಶುರುವಾಗುತ್ತಿತ್ತು .ಅತ್ತೆ ಯವರಿಗೆ ಮದುವೆ ಆದ ನಂತರ ಅಕ್ಕ ಮತ್ತು ನಾನು ಈ ಜವಾಬ್ದಾರಿ ಕೈಗೆತ್ತಿಕೊಂಡಿದ್ದೆವು, ಉಳಿದ ದಿನದಲ್ಲಿ ಅಮ್ಮನೇ ಬಚ್ಚಲು ಮನೆಕೆಲಸ ನೋಡುವುದು ಆದರೆ ಇವತ್ತು ಇಲ್ಲಿ ಅವರು ಬರುವುದಿಲ್ಲ, ಬೆಳಗ್ಗೆ ಕೊನೆಯ ಸ್ನಾನ ಮಾಡಿ ಹಂಡೆ ಖಾಲಿ ಮಾಡುವ ಕೆಲಸ ವಷ್ಟೇ ಅವರಿಗೆ..ಶಾಲೆಯಿಂದ ಬರಬೇಕಾದರೆ ೨ ರುಪಾಯಿಯ ಬಣ್ಣದ ಚೋಕ್,೪ ರುಪಾಯಿಯ ಬಿಳಿಯ ಚೋಕ್ ತರುವುದು.ಮನೆಗೆ ಬಂದ ಇಬ್ಬರೂ ಬಟ್ಟೆ ಕಳಚಿ ಬಚ್ಚಲು ಮನೆಗೆ ಎಂಟ್ರಿ ಹೊಡೆಯುತಿದ್ದೆವು ,..


ಇಲ್ಲಿ ಅಕ್ಕ ತಂದೆಯವರು ತಂದ ಗೊಂಡಿಗೆ ಹೂವಿನಿಂದ ಮಾಲೆ ಹೆಣೆಯುತ್ತಾಳೆ;.ಬಾವಿಯ ಪಕ್ಕದಲ್ಲಿ ಅಮ್ಮ ಮೀನಿನ ರಾಶಿ ಕೊಚ್ಚುತ್ತಾ ಇರುತ್ತಾರೆ.ಹಬ್ಬದಂದು ಮೀನೇ ಎಂದು ಆಶ್ಚರ್ಯವೇ ..? ಹುಂ ಮೀನು, ಇಂದು ಮೀನು ತಿನ್ನಲೇ ಬೇಕಾದದ್ದು  ಮಂಗಳೂರು ಪರಿಸರದಲ್ಲಿ ಅದರಲ್ಲೂ ಮೀನು ತಿನ್ನುವ GSB ಮನೆಗಳಲ್ಲಿ ಅಂದು ಮೀನಿನ ಭಕ್ಷ್ಯ ಸೇವಿಸುವುದು ಇನ್ನೊಂದು ವಾಡಿಕೆ .೨- ೩ ಬಗೆಯ ಮೀನಿನವಿದಗಳಿರುವುದು, ೩-೪ ಗೆಯ ಸಾಂಬಾರು ತಯಾರಾಗುತ್ತದೆ ನೆಚ್ಚಿ ತಿನ್ನಲು ಕರಿದ ಮೀನೂ ಸಾಥ್ ಕೊಡುವಂತದ್ದು, ಹುಂ ಈಗ ನೆನೆಸಿದರೆ ಬಾಯಲ್ಲಿ ನೀರೂರುತ್ತಿದೆ.


ಅಕ್ಕನಿಗೆ ಬಚ್ಚಲು ಮನೆಯ ಬಾಗಿಲು ತೊಳೆದು ಶ್ರಂಗಾರಿಸುವ ಪಾಲು ,ನನ್ನ ಪಾಲಿಗೆ ಒಳಗಿನ ಎರಡು ಹಂಡೆ,.ಒಂದು ಹಿತ್ತಾಳೆಯ ಹಂಡೆ, ಹುಳಿ ಹಾಕಿ ಕಾಲು ಗಂಟೆ ತಿಕ್ಕಲು ಚಿನ್ನದಂತೆ ಹೊಳೆಯುತಿದ್ದರೆ ಬದಿಯಲ್ಲೇ ಇದ್ದ ತಾಮ್ರದ ಇನ್ನೊಂದು ಹಂಡೆ ಗಂಡನ ಸೌಂದರ್ಯ ನೋಡಿ ಇನ್ನೂ ಕೆಂಪಾಗಿ ತಾನು ನೂರು ವರುಷ ದಾಟಿದ ಮುದಿ ವಧು ಎಂಬುದನ್ನು ಮರೆತು ನಾಚುತಿತ್ತು .ಬಳಿಕ  ಅದರ ಮೇಲೆ ಬಣ್ಣದ ಚೋಕ್ ನಿಂದ ಬಗೆ ಬಗೆಯ ಚಿತ್ತಾರ ಮಾಡಿ ಹೊರಬರಲು,ಬಾಗಿಲಲ್ಲಿ ಅಕ್ಕ ಬಿಡಿಸಿದ ಸಾಲು ಸಾಲು ಹಣತೆಗಳು ಬೆಳಗುತಿದ್ದವು.


ಅಲ್ಲಿಂದ ನಾನು ನಮ್ಮ ಗದ್ದೆಯ ಕಡೆಗೆ ಹೋಗಿ ಅದ್ಯಾವುದೋ ಬಳ್ಳಿ ತರುವುದು ವಾಡಿಕೆ, ಅದಕ್ಕೆ ಏನೆನ್ನುತ್ತಾರೆ ಎಂದು ಮರೆತೋಗಿದೆ, ಸಣ್ಣ ಇರುವಾಗ ತಂದೆ ಅದನ್ನು ಹಂಡೆಗೆ ಸುತ್ತಿಸುವುದು ವಾಡಿಕೆ ಅಂತ ಹೇಳಿದ್ದರು, ಆ ವಾಡಿಕೆ ನಾನು ಮುಂದುವರಿಸಿದ್ದೆ ಹೊರತು ಅದರ ಹಿಂದಿನ ಕಾರಣ ಗೊತ್ತಿರಲಿಲ್ಲ.
ಕೈಕಾಲು ಹೊರಗೆ ತೊಳೆದು ಬಂದು ಕಾಫೀ ಕುಡಿದು ಕುಳಿತು ಕೊಳ್ಳುತಿದ್ದಂತೆ ಗೋಧೋಳಿ ಮುಹೂರ್ತ ಶುರುವಾಗುವುದು.ಸುತ್ತಲಿನ ಮನೆಯವರು ನೀರು ಸೇದಲು ಜಾಗಟೆ ಬಾರಿಸುತ್ತಿದ್ದಂತೆ, ನಮ್ಮಲ್ಲಿ ಪಟಾಕಿ ಸಿಡಿಯಲಾರಂಬಿಸುತಿತ್ತು, ಅಮ್ಮ ರಾಟೆಗೆ ಎಣ್ಣೆ ಬಿಟ್ಟು ಬಾವಿಗೆ ಕುಂಕುಮ,ಸಿಂಧೂರ,ಕಾಡಿಗೆ ಹಚ್ಚಿ ಸಣ್ಣ ದೊಂದು ಹೂ ಮಾಲೆ ಹಾಕಿ ಆರತಿ ಬೆಳಗುತಿದ್ದರು.ಅಂದು ಎಲ್ಲಾ ಕೊಡಪಾನ, ಹಂಡೆ,ತಪ್ಪಲಿಗೆ ಎಲ್ಲದರಲ್ಲೂ ನನ್ನ ಮತ್ತು ಅಕ್ಕನ ಚಿತ್ತಾರ ಮೂಡುತಿದ್ದವು, ಎಲ್ಲದರ ಕತ್ತಲ್ಲು ಹಳದಿ,ಕೇಸರಿ ಗೊಂಡಿಗೆಯ ಮಾಲೆಯು ಅವುಗಳ ಸ್ವೌಂದರ್ಯ ಹೆಚ್ಚಿಸುತಿದ್ದವು.ಅಟ್ಟದ ಮೇಲೆ ಇರುವ ನನ್ನ ಅಜ್ಜಿಗೆ ಮದುವೆಯಲ್ಲಿ ಉರುಗೊರೆ ಸಿಕ್ಕಿದ ತಾಮ್ರದ ಕೊಡಕ್ಕೆ ಈ ಸಂಜೆ ಬಾವಿಯಲ್ಲಿ ಮುಳುಗುವ ಸಂಭ್ರಮ, ಅಮ್ಮ ಮೊದಲಿಗೆ ಆ ಕೊಡದಿಂದ ಮುಹೂರ್ತದ ನೀರನ್ನು ಹಂಡೆಗೆ ತುಂಬಿಸುತಿದ್ದರು, ಮತ್ತೆ ಇನ್ನೊಂದು ಕೊಡ ನೀರು ಸೇದಿ ಪಾನಕಕ್ಕೆ ಒಯ್ಯುತಿದ್ದರು. ಮತ್ತೆ ಅಮ್ಮ ಮನೆಯ ಒಳಗಿನ ಕೆಲಸಕ್ಕೆ ಇಳಿದರೆ ನಾನು ಅಕ್ಕ ತಾಮ್ರದ ಕೊಡ ಹೊರಲಾಗದೆ ಅಲುಮಿನಿಯಂ ಕೊಡದಿಂದಲೇ ೨ ಹಂಡೆ ತುಂಬಿಸುತಿದ್ದೆವು. ಉಳಿದ ದಿನದಲ್ಲಿ ನಳ್ಳಿಯಿಂದಲೇ ಈ ಕೆಲಸ ಆಗುತ್ತವೆ ಆದರೆ ಇಂದು ಹಬ್ಬ, ಇಂದು ಕೈಯಾರೆ ಸೇದಿ ಹಾಕಲು ಒಂದು ಚೂರು ಅಯಾಸವಾಗದು. ಬಳಿಕ ಒಲೆಯ ಬಳಿಗೆ ಹೋಗಿ ಅಪ್ಪ ಹೊಡೆದಿಟ್ಟಿರುವ ಸೌಧೆ ಇಂದ ನಾನು ಅಕ್ಕ ನೀರು ಕಾಯಿಸಲು ಶುರು ಮಾಡುತಿದ್ದೆವು. ಈ ಎಲ್ಲಾ ಕಾರ್ಯದಲ್ಲಿ ಅಪ್ಪನಿಗೆ ಚೂರು ಕೂಡ ಪ್ರವೇಶಿಸಲು ಆಸ್ಪದ ನೀಡುತಿರಲಿಲ್ಲ.
ಅಮ್ಮನ ಮನೆಯ ಒಳಗಿನ ಕೆಲಸ ಮುಗಿಯುತಿದ್ದಂತೆ ಹಿತ್ತಾಳೆಯ ಒಂದು ಬಿಂದಿಗೆಯಲ್ಲಿ ಕೊಬ್ಬರಿ ಎಣ್ಣೆ ಯೊಂದಿಗೆ ಜಗಲಿಯಲ್ಲಿ ಬಂದು ಕುಳಿತು ಕೊಳ್ಳುತಿದ್ದರು, ಮೊದಲಿಗೆ ನನ್ನ ಸರದಿ ಅಂಗಿ ಬಿಚ್ಚಿ ಮೈಯೆಲ್ಲಾ ಎಣ್ಣೆ ಸವರುತ್ತಿದ್ದರು, ಏನೋ ಆನಂದ ಆದರೆ ಯಾವಾಗ ಅಮ್ಮ ಕಿವಿಗೆ ಎಣ್ಣೆ ಬಿಡುತ್ತಾರೋ, ಬೇಡ ಎಂಬ ಒತ್ತಾಯ , ಎಲ್ಲಿ ಪಟಾಕಿಯ ಸ್ವರ ಕಮ್ಮಿ ಕೆಳಿಸಿಯತೋ ಎಂಬ ಚಿಂತೆ ಮನದಲ್ಲಿ. ಬಳಿಕ ಅಕ್ಕನಿಗೂ ಎಣ್ಣೆ ಹಾಕುತಿದ್ದರು. ಹೀಗೆ ಮೈಯೆಲ್ಲಾ ಎಣ್ಣೆ ಮಾಡಿ ಅಮ್ಮ ಬೆಳಗ್ಗೆ ತೊಳೆದು ಇಟ್ಟಿರುವ ಹಣತೆಯನ್ನು ಮನೆಯ ಎದುರು ಕಂಪೌಂಡ್ ಮೇಲೆ ಸಾಲಾಗಿ ಇಡುವುದು, ಬತ್ತಿ ಇಟ್ಟು ಎಣ್ಣೆಹಾಕಿ ಹಚ್ಚಿ ಆನಂದ ಪಡುವುದು.ಜೊತೆಗೆ ಕೊಟ್ಟಿಗೆಯಲ್ಲಿ ಒಂದು ಹಣತೆ, ಬಚ್ಚಲು, ಬಾವಿ, ಭೂದಿ ಹಾಕುವ ಕೋಣೆ ಎಲ್ಲದರಲ್ಲೂ ಒಂದೊಂದು ಹಣತೆ.
ಈಗ ದೀಪಾವಳಿಯ ಸಡಗರ ಹೆಚ್ಚಿಸುವಂತ ಪಟಾಕಿಯ ಸರದಿ. ಎಲ್ಲರ ಮನೆಯಲ್ಲಿ ಈ ಹಬ್ಬ ಇರುವುದರಿಂದ ನೆಂಟರಿಷ್ಟರು ಬರುವುದು ಕಡಿಮೆ ದೀಪಾವಳಿಗೆ, ಮನೆ ಇಂದ ಮದುವೆ ಆಗಿಹೋದ ಹೆಣ್ಣು ಮಕ್ಕಳು , ಇಲ್ಲ ಮಮ್ಮಕ್ಕಳು ಮೊದಲ ದೀಪಾವಳಿ ಆಚರಣೆಗೆ ಬಂದಾಗ ಮಾತ್ರ ಮನೆ ತುಂಬಿರುತಿತ್ತು ವಿನಃ ಬಹುತೇಕ ದೀಪಾವಳಿ ನಾವು ಮನೆಯವರೇ ಆಚರಿಸುತಿದ್ದೆವು, ಚಿಕ್ಕಪ್ಪಂದಿರಿಗೆ ಇನ್ನೂ ಮದುವೆ ಆಗಿರಲಿಲ್ಲ,ಮನೆಯಲ್ಲಿ ಇಬ್ಬರೇ ಮಕ್ಕಳು ಎಲ್ಲರ ಮುದ್ದು ನಮ್ಮಿಬ್ಬರಿಗೆ ಸಿಗುತಿತ್ತು.ಅಕ್ಕನು ದೊಡ್ಡ ದೊಡ್ಡ ಪಟಾಕಿ ಹಚ್ಚುತಿರಲಿಲ್ಲ, ಆದುದರಿಂದ ಎಲ್ಲದರಲ್ಲೂ ನನ್ನದೇ ಸಿಂಹಪಾಲು.ದೀಪಾವಳಿಗೆ ಕಮ್ಮಿಯೇ ಪಾಟಕಿ ಹಚ್ಚುತಿದ್ದೆವು. ನಮ್ಮಲ್ಲಿ ತುಳಸಿ ಪೂಜೆಗೆ ಹೆಚ್ಚಿನ ಪಟಾಕಿ ಹಚ್ಚುತಿದ್ದೆವು. ತಂದೆಯವರು ದೀಪಾವಳಿಗೆ ಸ್ವಲ್ಪಾನೆ ಪಟಾಕಿ ತರುತಿದ್ದರು,ತುಳಸಿ ಪೂಜೆಗೆ ಮತ್ತೆ ತರುತಿದ್ದರು, ಒಮ್ಮೆಲೇ ತಂದರೆ ತಂದ ದಿನವೇ  ನಾವು ಮುಗಿಸುತ್ತೇವೆ ಎಂದು ಅವರಿಗೆ ಗೊತ್ತಿತ್ತು.


ಒಂದು ವರುಷ ಅವರು ತಮ್ಮ ಅಂಗಡಿಯ ಗಡಿಬಿಡಿಯಲ್ಲಿ ದೀಪಾವಳಿಯ ಹಿಂದಿನ ದಿನ ಪಾಟಕಿ ತರುವುದು ಮರೆತಿದ್ದರು, ಇಲ್ಲಿ ನನ್ನ ಮೌನ ಪ್ರತಿಭಟನೆ ಶುರುವಾಗಿತ್ತು. ಅವರೊಂದಿಗೆ ಮಾತು ಮುರಿಸಿ ಕೊಂಡೆ, ಅಮ್ಮ ಎಷ್ಟು ಸಮಾಧಾನ ಪಡೆದರು ಅಳುತಲಿದ್ದೆ, ಅವರಿಗೆ ನನ್ನ ಬೇಡಿಕೆ ಹೇಳಬೇಕಿತ್ತು ಆದರೆ ನೀವು ಪಟಾಕಿ ತರುವ ವರೆಗೆ ನಿಮ್ಮಲ್ಲಿ ಮಾತಾಡುದಿಲ್ಲ ಎಂದು ಹೇಳಿದ್ದೆ, ಕೊನೆಗೆ ನನ್ನ ಬೇಡಿಕೆ ಅವರಿಗೆ ಹೇಗೆ ಹೇಳುವುದು ಎಂದು ತಿಳಿಯದೆ ಅವರು ಕುಳಿತುಕೊಳ್ಳುವ ಮೇಜಿನ ಮೇಲೆ ಶಾಲೆ ಇಂದ ತಂದಿದ್ದ ಚೋಕ್ ನಲ್ಲಿ "ಒಂದು ಪ್ಯಾಕ್ ಸುರ್ ಸುರ್ ಕಡ್ಡಿ, ಒಂದು ಪ್ಯಾಕ್ ದುರುಸು, ಒಂದು ಪ್ಯಾಕ್ ದುರುಸು, ಒಂದು ಪ್ಯಾಕ್ ನೆಲಚಕ್ರ , ಒಂದು ಪ್ಯಾಕ್ ಹಾವಿನ ಮಿಟಾಯಿ ..... "ಹೀಗೆ ನನ್ನ ಸಣ್ಣ ಮಟ್ಟಿನ ಲಿಸ್ಟ್ ಬರೆದಿಟ್ಟಿದ್ದೆ, ನಾನಾಗಿನ್ನು ೨- ೩ ನೆ ಕ್ಲಾಸ್ ಇದ್ದ ಕಾರಣ ಅದರಲ್ಲಿ ದೊಡ್ಡ ಪಟಾಕಿಯ ಹೆಸರಿರಲಿಲ್ಲ.ಮನೆಗೆ ಬಂದವರೇ, ತಂದೆ ಈ ಹೊಸ ಪ್ರತಿಭಟನೆ ನೋಡಿ ಮುಗುಳ ನಕ್ಕರು, ತನ್ನ ಚೀಲದಲ್ಲಿದ್ದ ಪಟಾಕಿಯ ಗಂಟನ್ನು ನನ್ನ ಮತ್ತು ಅಕ್ಕನ ಕೈಗೆ ಇಟ್ಟರು ಅಂದು ಪಟಾಕಿ ಹೊಡೆಸಿದಕಿಂತ ಹೆಚ್ಚು ಕುಶಿ ಕೊಟ್ಟಿತ್ತು.
ಹೀಗೆ ಪಟಾಕಿ ಹೊತ್ತಿಸಿ, ಬಳಿಕ ಕೈಯನ್ನು ಪುನಃ ತೊಳೆದು ನಾನು ಅಕ್ಕ ಉಟಕ್ಕೆ ಕುಳಿತುಕೊಳ್ಳುವುದು,ಬಗೆಬಗೆಯ ಭಕ್ಷ್ಯ ಸವೆದು ಮುಂದಿನ ಮಹಾ ಮಜ್ಜನಕ್ಕೆ ಇಬ್ಬರೂ ಅಣಿಯಾಗುತಿದ್ದೆವು.
ಇಲ್ಲೂ ಮನೆಯ ಸಣ್ಣ ಸದಸ್ಯನಾದ ನನ್ನಿಂದಲೇ ಸಮಾರಂಭ ಉದ್ಘಾಟನೆ, ಕುದಿಯುತ್ತಿರುವ ಹಂಡೆಯಿಂದ ಅಮ್ಮ ಒಂದು ಬಾಲ್ದಿಯಲ್ಲಿ ನೀರನ್ನು ಯಾವಾಗಿನಕಿಂತ ೧೦ ಡಿಗ್ರೀ ಹೆಚ್ಚು ಬಿಸಿಗೆ ನೀರನ್ನು ಹದಮಾಡಿ ತಲೆಮೇಲೆ ಸುರಿಯುತಿದ್ದರು.ಇಲ್ಲಿ ಅಕ್ಕ ಒಲೆಗೆ ಇನ್ನೂ ಕಟ್ಟಿಗೆ ಇಡುತ್ತಾ ಇರುತಿದ್ದಳು. ಬಾಲ್ದಿ ಗಟ್ಟಲೆ ನೀರು, ಸೋಪ್ ಇಲ್ಲಿ ನಮ್ಮ ಮೈಯ ಎಣ್ಣೆ ತೆಗೆಯುತ್ತ ,ಬದಿಯ ತೂತಿನಿಂದ ಹೊರ ಹರಿಯುತಿತ್ತು. ಇನ್ನೊಂದು ವಿಶೇಷ ಎಂದರೆ ಇಂದು ಸಾಬೂನಿನೊಂದಿಗೆ ಕಡ್ಲೆ ಹಿಟ್ಟು ಜಿಡ್ಡು ತೆಗೆಯಲು ಬಳಸುವುದು.


ಹೀಗೆ ಸ್ನಾನ ಮಾಡುತಿರಬೇಕಾದರೆ ಒಂದು ವರ್ಷ ನನಗೂ ಅಕ್ಕನಿಗೂ  ಒಂದು ಸಣ್ಣ ಜಗಳವಾಗಿ ಅವಳು ದೂಡಿದ ಪೆಟ್ಟಿಗೆ ನಾನು ಆ ಕುದಿಯುವ ಹಂಡೆಯ ಮೇಲೆ ಬಿದ್ದು ಮೈ ಸುಟ್ಟುಕೊಂಡ ನೆನಪು ಇಂದೂ ಹಸಿಯಾಗಿದೆ.

ಸ್ನಾನ ಮಾಡಿ ಮುಗಿದಿದ್ದರೂ ಮೈಯಿಂದ ಹಬೆ ಇನ್ನೂ ಬರುತ್ತಾ ಇರುತ್ತದೆ ಅಷ್ಟು ಬಿಸಿ ನೀರು ಅಮ್ಮ ಮೈಮೇಲೆ ಹಾಕುತಿದ್ದರು, ಮತ್ತೆ ಅಮ್ಮ ಅಂದು ತಲೆಗೆ ಮುಂಡಾಸು ಕಟ್ಟುತಿದ್ದರು, ಬಳಿಕ ಇನ್ನೊಂದು ಶಾಲು ನನಗೆ ಹೊದೆಸಿ ಮನೆ ಒಳ ಕಳಿಸಿ ಅಕ್ಕನ ಮಹಾ ಮಜನಕ್ಕೆ ಮುಂದಾಗುತಿದ್ದರು.ನಾನು ಒಳ ಬಂದವನೇ ಒಲೆಯ ಮೇಲಿರುವ ಕಷಾಯ ಕುಡಿದು ನಡು ಕೋಣೆಯಲ್ಲಿ ಮಲಗುತಿದ್ದೆ, ಕೆಳಗೆ ಹಾಸಿದ್ದ ಚಾಪೆ ಬಂದ ಬೆವರಿಗೆ ಒದ್ದೆಯಾಗಿ ನಿದ್ದೆ ಇಂದ ಎಚ್ಚರವಾಗುತಿದ್ದೆ , ಬಳಿಕ ಪುನಃ ಅಂಗಿ ತೊಟ್ಟು ಅಂಗಡಿಯಿಂದ ಆಗತಾನೆ ಬಂದಿದ್ದ ಅಪ್ಪ ಮತ್ತು ಚಿಕ್ಕಪ್ಪಂದಿರಿಗೆ ಎಣ್ಣೆ ಸವರುವ ಕಾರ್ಯಕ್ರಮ,ಅವರಿಗೆ ಎಣ್ಣೆ ಹಚ್ಚುತ್ತ ಪುನಃ ಮೈ ಎಣ್ಣೆ ಆಗುವುದು.


ಅಮ್ಮ ಅಪ್ಪನಿಗೂ ಮಜ್ಜನ ಮಾಡಿಸಿದಾಗಿರುತ್ತದೆ.ಬಳಿಕ  ಚಿಕ್ಕಪ್ಪಂದಿರು ಬೆನ್ನು ತಿಕ್ಕಲು ಯಾರು ಇಲ್ಲದ ಕಾರಣ ನನ್ನ ಕರೆಯುತಿದ್ದರು,ಅವರಿಗೆ ಸ್ನಾನ ಮಾಡಿಸುತ್ತ ಮತ್ತೆ ನನಗೆ ಸಣ್ಣ ಮಜ್ಜನ.ನಾಳಿನ ಪಟಾಕಿ ಹೊಟ್ಟಿಸುವ ಕನಸಲ್ಲೇ ನಿದ್ದೆಗೆ.

ದೀಪಾವಳಿ ದಿನ ಪಾಯಸದ ಊಟ, ಸಂಜೆ ಮತ್ತೆ ಹಣತೆ ಮತ್ತು ಪಟಾಕಿಗಳೊಂದಿಗಿನ ಆಟ, ಕೈಯಲ್ಲಿ ಅಂದು ಇದ್ದ ಕೋಡೆಕ್ ಕ್ಯಾಮೆರಾದಲ್ಲಿ ಪಟಾಕಿ ಸಿಡಿಯುವ ಚಿತ್ತಾರ ಸೆರೆಹಿಡಿಯುವ ತವಕ,ಫೋಟೋ ಡೆವೆಲೋಪ್ ಅದ ಬಳಿಕ ಹಿಂದಿನ ವರುಷದ ಫೋಟೋ ಒಡನೆ ಈ ವರುಷದ ಫೋಟೋ ಹೋಲಿಸುವುದು.

ಎರಡನೇ ದಿನ ಅಂಗಡಿಪೂಜೆ, ಅಗಂಡಿಪೂಜೆ ಯಲ್ಲಿ ಸಿಕ್ಕ ಸ್ವೀಟ್ಸ್ ತಿನ್ನಲು ನನ್ನಲ್ಲಿ ಮತ್ತು ಅಕ್ಕನಲ್ಲಿ ಪೈಪೋಟಿ.ಅಪ್ಪ ನಮ್ಮಿಬ್ಬರಿಗೂ ಒಂದೊಂದು ಬಾಕ್ಸ್ ಸ್ವೀಟ್ಸ್ ಕೊಡುತಿದ್ದರು, ಎರಡು ದಿನ ಅವ್ವೆ ನಮ್ಮ ಸರ್ವಸ್ವ ಅವಳು ಮಲಗಿರುವಾಗ ಅವಳ ಬಾಕ್ಸ್ ನಿಂದ ಗೊತ್ತಾಗದಂತೆ ಕದ್ದು ತಿಂದಿದ್ದು ಉಂಟು, ಅವಳೂ ನನ್ನಿಂದ ತಿಂದಿದ್ದು ಉಂಟು !!!


ಮಾರನೆ ದಿನ ಗೋ ಪೂಜೆ, ಈಗ ಕೊಟ್ಟಿಗೆ ಶ್ರಂಗರಿಸುವ ಕೆಲಸ, ಮಾವಿನ ತೋರಣ ಕಟ್ಟುವುದು, ತಂದೆಯವರು ಹಸುವಿಗೆ ಮೀಯಿಸಲು ಕರುವಿಗೆ ನನ್ನ ಸ್ನಾನ, ಬಳಿಕ ಅವುಗಳ ಶರೀರದಮೇಲೆ ಶೇಡಿ ಕರಗಿಸಿ ಬ್ರುಶ್ ಮೂಲಕ ಚಿತ್ತಾರ ಮೂಡಿಸುವುದು. ಅವುಗಳಿಗೂ ಗೊಂಡಿಗೆಮಾಲೆ ಅರ್ಪಿಸುವುದು. ಅಮ್ಮ ಒಳ ಮನೆಯಲ್ಲಿ ಗೋವಿಗೆ ಪಂಚಕಜ್ಜಾಯ, ಹಾಗು ಇತರ ತಯಾರಿಯಲ್ಲಿ ಬ್ಯುಸಿ ಆಗಿರುತಿದ್ದರು.


ಮೊದಲು ಗೋವಿನ ತಲೆಗೆ ಎಣ್ಣೆ ಸವರುವುದರಿಂದ ಗೋವುಪೂಜೆ  ಆರಂಭ. ಅಮ್ಮ ಗೋವಿಗೆ ಕುಂಕುಮದಿಂದ ಚಂದದೊಂದು ಚಂದಿರನ ಬೊಟ್ಟು ಇಡುತಿದ್ದರು.ಬಳಿಕ ಒಂದು ಹರಿವಾಣ ತುಂಬಾ ಭತ್ತ, ಬಾಳೆಹಣ್ಣು ,ಮತ್ತು ಮಾಡಿದ ಪಂಚಕಜ್ಜಾಯ ದ ನೈವಿದ್ಯ ಗೋವಿಗೆಮತ್ತು ಕರುವಿಗೆ.ಅಪ್ಪ ಆರತಿ ತೋರಿಸುತಿದ್ದರೆ ಅಕ್ಕನ ಜಗಾಟೆಗೆ ನನ್ನ ಮಾಲೆ ಪಟಾಕಿ,ಬೀಡಿ ಪಟಾಕಿಗಳ ಹಿಮ್ಮೇಳ.


ಕೊಟ್ಟಿಗೆಯಲ್ಲಿ ಗೋವು ಮತ್ತು ಕರುವಿಗೆ ಸಂಭ್ರಮ ಪಡುತಿದ್ದರೆ ನೀಯತ್ತಿನ ನಾಯಿಗೆ ಮನಸಲ್ಲೇ ಅಸೂಯೆ ಮೂಡುತ್ತಿತ್ತು, ಜೊತೆಗೆ ನಮ್ಮ ಪಟಾಕಿ ಸದ್ದಿಗೆ ಒಂದುವಾರ ಪೇಟೆಯಲ್ಲೇ ಇರುತಿತ್ತು :(  


ವರುಷ ಕಳೆಯುತಿದ್ದಂತೆ ಏಲ್ಲವೂ ಬದಲಾಯಿತು,ಚಿಕ್ಕಪ್ಪಂದಿರಿಗೆ ಮದುವೆ ಆಗಿ ಮನೆ ಬೇರೆಯಾದವು, ಜಗಳವಾಡುತಿದ್ದ ಬಾಲ್ಯ ಮುಗಿದೇ ಹೋಯಿತು.ತಂದೆಯವರಿಗೆ ಕಾಲು ನೋವು ಬಂದಾಗಿಂದ ಕೊಟ್ಟಿಗೆ ಕಟ್ಟಿಗೆ ತುಂಬುವ ಕೋಣೆ ಆಯಿತು. ಅಕ್ಕನಿಗೂ ಮದುವೆ ಆಯಿತು, ಅಮ್ಮನಿಗೆ ಈಗ ಆ ತಾಮ್ರದ ಕೊಡದಲ್ಲಿ ಮುಹೂರ್ತ ಮಾಡಲಾಗುದಿಲ್ಲ ಈಗ ಸಣ್ಣ ಗಾತ್ರದ ತಾಮ್ರದ ಬಿಂದಿಗೆಯಲ್ಲೇ ಕರ್ತವ್ಯ ಮುಗಿಸುತ್ತಾರೆ.ನೀರನ್ನು ಸೇದಿ ಹಾಕುವ ಪುರೋಸೋತ್ತಿಲ್ಲ ಯಾರಿಗೂ , ನಳ್ಳಿಯೇ  ಗಂಗೆ ಎಂಬ ಭಾವ ಬಂದಾಯ್ತು.


ಕಳೆದ ಎರಡು ವರುಷದಿಂದ ಅಂತು ಇವೆಲ್ಲ ನನ್ನ ಮನದಲ್ಲಿದೆ ಹೊರತು ಅನುಭವಿಸುವ ಯೋಗವಿಲ್ಲ.೨೦೦೯ ನೇ ದೀಪಾವಳಿಯ ರಾತ್ರಿಯಂದೇ ನಾಗ್ಪುರ್ ದಿಂದ ಹೈದರಾಬಾದ್ ಗೆ ಬರಬೇಕಾಗಿತ್ತು, ರಜೆ ಕೇಳಿದರೂ ಕೊಟ್ಟಿರಲಿಲ್ಲ. ಒಂದು ದಿನದ ರಜೆ ಅಲ್ಲಿ ಊರಿಗೆ ಹೋಗಿ ಅಲ್ಲಿಂದ ಪುನಃ ಹೈದರಾಬಾದ್ ತಲುಪುವುದು ಕಷ್ಟವೇ ಸರಿ ಎಂದು, ನಾನು ಸೇರಿದಂತೆ ನಾಲ್ಕು ಮಂದಿ ಟ್ರೈನ್ ನಲ್ಲೆ ದೀಪಾವಳಿ ಸಿಹಿ ತಿಂದಿದ್ದೆವು :(
ಕಳೆದ ವರ್ಷ ಕೆಲಸದ ಅತಿ ಒತ್ತಡ ದಿಂದ ದೀಪಾವಳಿಯ ಮೂರು ದಿನವೂ ಆಫೀಸ್ ನಲ್ಲಿ ಉಳಿಯ ಬೇಕಾಗಿತ್ತು. ಮಾಲ್ ನ  ದೀಪಾವಳಿಯನ್ನು ಆಚರಿಸುವ ಹೈದರಾಬಾದ್ ಜನರನ್ನು ನೋಡಿ ಮತ್ತೆ ಹಳೆ ನೆನಪನ್ನು ಗುನುಗಿಸುವ ಯೋಗ ನನ್ನದಾಗಿತ್ತು.
ಇಂದು  ಪುನಃ ಅದೇ ರಾಗ, ಬರೇ ಫೇಸ್ಬುಕ್  ನಲ್ಲಿ ಮೆಸ್ಸೇಜ್ ಹಾಕಿ ದೀಪಾವಳಿ ಆಚರಿಸುತಿದ್ದೇನೆ. ನೂರಕ್ಕೂ ಮೀರಿ ಇರುವ ಗೆಳೆಯರ ಬಳಗದಲ್ಲಿ ಯಾರಿಗೆ ಎಸ್ಸೆಮ್ಮೆಸ್ಸು ಕಳಿಸುವುದು ಯಾರನ್ನು ಬಿಡುವುದು ತಿಳಿಯುತ್ತಿಲ್ಲ.TRAI ನ ಹೊಸ ನಿಯಮ ಕಳಿಸುವ ಎಸ್ಸೇಮೆಸ್ಸಿನ ಮೇಲೂ ನಿರ್ಭಂದ ವಿಟ್ಟಿದೆ.


ಎಲ್ಲರೂ ಸಿಹಿ ತಿನುತ್ತಾ, ಹಬ್ಬ ಆಚರಿಸುತ್ತಾ ನನ್ನ ನೆನಪಿಸಿದರೆ ನಿಮ್ಮ ಮನೆಯಲ್ಲೇ ನನ್ನ ಈ ವರುಷದ ದೀಪಾವಳಿ ಆಚರಿಸುವೆನು.
ಕಾಮತ್ ಕುಂಬ್ಳೆ


Friday, October 7, 2011

ಬೆಂಚೇಶ್ವರ......

ಹಾಗೆ ಇನ್ನೊಂದು ಕವನ ಪರಮಾತ್ಮನ ಗುಂಗಿನಲ್ಲಿ ....ಓಫಿಸ್ನಲ್ಲಿ ಸೋತು ಕೂತವರ ಕಾಪಾಡೋ ಬೆಂಚೇಶ್ವರ,
ಅಪ್ರೈಸಲ್ ನಲ್ಲಿ ಸೊನ್ನೆ ರೌನ್ಡಾಗಿ ಕಾಣುವುದು ಏನ್ಮಾಡ್ಲಿ ಮಾಡ್ಲಿ ಬೆಂಚೇಶ್ವರ

ಒಳಗೊಬ್ಬ ಒಬ್ಬ ಒಬ್ಬ ಒಬ್ಬ ಕೋಡರ್
ಬೆಂಚ್ ಬೇಕು ಬೇಕು ಬೇಕು ಅಂತಾನೆ
ನಮ್ಮಪ್ಪ ಅಪ್ಪ ಅಪ್ಪ ಅಪ್ಪ ಆ ಮ್ಯಾನೇಜರ್
ಕೋಡ್ ಮಾಡು ಮಾಡು ಮಾಡು ಅಂತಾನೆ
ರೆಸ್ಟ್ ಬೇಡ ಅನ್ನೋರ್ಉಂಟೆ ಬೆಂಚೇಶ್ವರ, ಕೋಡ್ ಮಾಡಿ ಏನ್ಮಾಡ್ಲಿ ಒಂದೇ ಸಲ ...?

ತನ ಡೂನ ಡೂನ ಡೂನ ಡೂ ಡೂನ

ಸಿ ಪ್ಲುಸ್ಸ್ ಪ್ಲುಸ್ಸು, ಜಾವ, ಡಾಟ್ ನೆಟ್ಟು... ಬಾಯ್ ಹಾರ್ಟು ಮಾಡು
ಓ ಮೈ ಗೋಡ್ಜಿಲ್ಲಾ .. ವಾಟ್ ಅ  ಮೆಮೊರೈಸಶನ್ ....
ಹೈಯೆಷ್ಟು ಲೈನು ಕುಟ್ಟೊನೇ ವೇಷ್ಟು, ಅರ್ದಕ್ಕೆ ನಿಲ್ಸಿ ಒಪ್ಪ್ಸಿದೋನೇ ಬೋಸು...
ಕೀ ಬೋರ್ಡೆ ಸರಿ ಇಲ್ಲ ಬೆಂಚೇಶ್ವರ, ಇನ್ನೆಷ್ಟು ಕುಟ್ಟೋದು ಬಡಗಿ ತರಾ ....
ಟ್ರೈ ಮಾಡು ಏನಾದ್ರೂ ಹೊಸ ತಾರಾ.. ತಲೆಯಲ್ಲೇ ಓಡ್ಸು ಕೊಡಿನ್ ಸರಾ ...

ಹೇ ಅಮ್ಮಾ ಹತ್ತಾದ್ರೂ ಇಲ್ಲೇ ಬಾಕಿ..
ಹೇ ರಾಮ ಹನ್ನೆರಡಕ್ಕೆ ಮುಂದಿನ ಟ್ಯಾಕ್ಸಿ ....

ಕಾಂಫಾರೆನ್ಸು ಹಾಲಲ್ಲಿ ನನ್ನ ಡ್ಯಾಮೆಜರ್
ಮಾರ್ನಿಂಗ್ ಶಿಫ್ಟ್ ಗೆ ಬಾ ಕಂದ ಅಂತಾನೆ ...
ಆಫೀಸಿನಲ್ಲಿ ನಾನೇ ಒಬ್ನೇ ಒಳ್ಳೆ  ಪುಣ್ಯಾತ್ಮ
ಎರಡೂ ಶಿಫ್ಟು ಕುಬಿಕಲ್ ನಲ್ಲೇ ಕೊಳಿತೇನೆ.....
ಆಫೀಸೇ ಸರಿಯಿಲ್ಲ ಬೆಂಚೇಶ್ವರ...
ಕೆಲಸಾನೂ ಇರಬಾರ್ದ ಪ್ರಯ್ಮರಿ ತರಾ ....

ತನ ಡೂನ ಡೂನ ಡೂನ ಡೂ ಡೂನ


ಕುಟ್ಕೊಂಡು ಕುಟ್ಕೊಂಡು ಕುಟ್ಕೊಂಡಿರು, ಡೌಟ್ ಇದ್ರೆ ಗೂಗಲ್ ನ ಕೇಳು ಗುರೂ ...
ಜುನಿಯರ್ಸ್ ಹೋಗ್ತಾರೆ ಯುಎಸ್ಸು ಫಾರಿನ್ ಗುರು, ಬಾಯ್ ಮಾಡ್ತಾ ನೀನು ಇಲ್ಲೇ ಕುಂತಿರು..
ಒಂಸೈಟು ಅನ್ನೋದೊಂದು ಬಣ್ಣದ ಟೋಪಿ ..
ಇಲ್ಲಿಂದ ಬಿಡ್ಸ್ಕೊಂದು ಹೋಗ್ಲಾದೊನೆ ಪಾಪಿ ...
ಏಳಕ್ಕೆ ಫೈಲ್ ಅದ ಶೇಕ್ಸ್ ಸ್ಪಿಯರ್  ಪುಣ್ಯಾತ್ಮ
ಇಂಗ್ಲಿಷ್ ನಲ್ಲಿ  ಸಾಮ್ರಾಜ್ಯ ಕಟ್ಟಲಿಲ್ವೇ...
ಅನಿಸೋದನ್ನೇ ಮಾಡೋನೇ ಪುಣ್ಯಾತ್ಮ ...
ಮಾಡೋಕೆ ನಮಗೆ ಪುರೋಸೋತ್ತು ಸಿಕ್ಕಲ್ವೆ....!!!!!
ಸಿಸ್ಟಮ್ಮೆ ಸರಿ ಇಲ್ಲ ಬೆಂಚೇಶ್ವರಾ ....
ಸಿ.ಇ.ಓ  ಆಗಿ ಬಿಡಲೇ ಒಂದೇ ಸಲಾ ...

 ಕ್ಯುಬಿಕಲ್ ಗೋಳು ಶಾಶ್ವತ....!!!  ಕಾಮತ್ ಕುಂಬ್ಳೆ