Thursday, February 24, 2011

ಓಲೆ


ಕಾದಿಹನು ಜನಸಂತೆಯ ಒಂಟಿ ಬಾಳಿನಲಿ
ಅರಸುತಲಿಹನು ದೂರದ ಊರಿನಲಿ
ದಿನವ ಕಳೆಯುತಲಿಹನು ನಾಳೆಯ ಬರವಸೆಯಲಿ 
ನಗುತ ಹೊಳೆಯುತಲಿಹನು ಹಳೆಯ ನೆನಪ ಆಸರೆಯಲಿ

ಹೇಳದ ವಿಷಯ ಮೂಡಿತು ಕಾಗದದಿ
ಕೇಳದ ಆಶಯ ಗೀಚಿದ ಪದದಲಿ
ನೋಡದ ವಿಸ್ಮಯ ಓದುವ ಕಣ್ಣಲಿ
ಕಾಡುವ ತನ್ಮಯ ವಿರಹಿ ಮನದಲಿ

ಬರೆಯಲು ಮೂಡಿದ ಭಾವ ವಿಲಾಸದಿ  
ಬಂದಿತೊಂದು ಕಾಗದ ನಲ್ಲನ ವಿಳಾಸದಿ
ಬರಡುಭೂಮಿಯ ಚಿಲುಮೆ ಅವನ ಕೈಯಲಿ  
ಶಶಿ ಸೂಸಿದ ತಂಗಾಳಿ ಸುಡು ಬೇಸಗೆಯಲಿ

ಮನದ ಭಾವದ ಅನಾವರಣ ಖಾಲಿ ಹಾಳೆಯಲಿ
ಕನಸ ಪಾತ್ರಗಳ ಅವತರಣ ಪದಗಳ ದಾಳದಲಿ
ತನ್ನ ಪದಕೆ ಹೊಸ ಅರ್ಥ ಅವಳ ಕಾಗದದಿ
ಮೂಕ ಭಾವಕೆ ರಾಗವು ಅವಳ ಮಾತಲಿ

ನಿಮ್ಮ
ಕಾಮತ್ ಕುಂಬ್ಳೆ

ಏನೆಂದು ನಾ ಹಾಡಲಿ


ಏನೆಂದು ನಾ ಹಾಡಲಿ
ಅಪರಿಚಿತ ನೋಟದ ಆ ಸೆಳೆತಕೆ ಈ ನೋಟ ವಶವಾಯಿತು
ಭೇಟಿಯಾಗದ ಇಬ್ಬರ ಹೃದಯದ ಬೇಟೆ  ಶುರುವಾಯಿತು
ಪ್ರಣಯ ಕಾದಂಬರಿಗೊಂದು ಮುನ್ನುಡಿ ಬರೆದಂತಾಯಿತು
ಪಯಣಿಗ ನಾ ನಿಂತಾಗ ಜಗವೇ ಕೈಹಿಡಿದು ಮುನ್ನಡೆಸಿದಂತಾಯಿತು || ಏನೆಂದು ನಾ ಹಾಡಲಿ ||


ಕಣ್ಣು ಹುಡುಕುತಿದೆ ಹುದುಗಿಟ್ಟ ಪ್ರಿತಿಪಾಠದ ಸಂಚಿಯ
ಕಾಲು ಹಾತೊರೆಯುತಿದೆ ಹರಿದಾಟದ ಆ ತಿಳಿ ಸಂಜೆಯ
ತುಟಿಯಂಚು ತುದಿಗಾಲಲಿ ನಿಂತಿದೆ ಪ್ರಣಯದ ಮಾತು ಉದುರಿಸಲು
ಗುಳಿಯೊಂದು ಕಾರಣ ಹೇಳದೆ ಮೊಗ್ಗಿನ ಗಲ್ಲದಲಿ ಅರಳಿತು || ಏನೆಂದು ನಾ ಹಾಡಲಿ  ||


ಮುಂಗುರಳ ಲಾಲಿಗೆ ಚಂದಿರ ಮಲಗಿದ ಮೇಘಚಾದರಹೊದ್ದು
ನಯನಶರ ಧಾಳಿಗೆ ಬಿಲ್ಲೊಂದು ಕಳಚಿತು ಬಣ್ಣವ ಮಳೆಯಲಿ ಮಿಂದು 
ಗೆಜ್ಜೆಯ ಝೇಂಕಾರಕೆ ಭ್ರಮರವು ಕಮಲದೊಡಲಲಿ ಮಂಪರು
ಲಜ್ಜೆಯ ವೈಯ್ಯಾರಕೆ ನವಿಲು ಸ್ಥಪತಿರಚಿತ ಒಂಟಿಕಾಲ ಶಿಲ್ಪ || ಏನೆಂದು ನಾ ಹಾಡಲಿ ||

ನಿಮ್ಮ
ಕಾಮತ್ ಕುಂಬ್ಳೆ