"ಅಮ್ಮ , ಹೇ ಪಟಿ ಅಯಿನಾ ಎವ್ಚಾ ಜಾಯ್ನ , ರಾಜ್ ಮೇಳ್ನಿ... ಏಕ ದಿಸ ರಾಜ್ ಮಾತ್ರ ಮೆಳ್ಳ ಗ್ವಾಲಿಯರ್ ವಚ್ಚುನ್ ಎತ್ತ "(ಈ ಬಾರಿ ಜಾತ್ರೆಗೆ ಬರಲಾಗುವುದಿಲ್ಲ, ರಜೆ ಸಿಕ್ಕಿಲ್ಲ,ಬರೇ ಒಂದೇ ದಿನದ ರಜೆ ಸಿಕ್ಕಿದೆ, ಗ್ವಾಲಿಯರ್ ಗೆ ಹೋಗಿ ಬರ್ತೇನೆ) ಅಂತ ಅಮ್ಮನಿಗೆ ಹೇಳಿ ಆಗಲೇ ಒಂದು ವಾರ ಕಳೆದಿತ್ತು. ಆಫಿಸ್ ನಲ್ಲಿ ವಾರ್ಷಿಕ ಕಾರ್ಯಕ್ರಮದಲ್ಲಿ ನಮ್ಮನ್ನು ನಾವು ತೊಡಗಿಸಿ ಕೊಂಡಿದ್ದುದರಿಂದ ಮ್ಯಾನೇಜರ್ ನ ಕಾಲಿಗೆ ಬೀಳಲು ಸಮಯ ಸಿಗದೇ ಹೋಗಿತ್ತು, ಕೊನೆ ಕ್ಷಣದಲ್ಲಿ ಒಂದು ದಿನದ ರಜೆ ಗೆ ಅಪ್ಪ್ರೂವಲ್ ಪಡೆದು ಗ್ವಾಲಿಯರ್ ಪಯಣಕ್ಕೆ ಹೊರಡುವುದನ್ನು ನಿಶ್ಚಯಿಸಿ ಕೊಂಡೆವು.
೨ ದಿನ ಹಿಂದೆ ತೆರೆಯುವ ತತ್ಕಾಲ್ ನಲ್ಲಿ ಮೂರು ಟಿಕೆಟ್ ಗಳನ್ನೂ ಪಡೆದದ್ದಾಯಿತು.ಸಂಕ್ರಾಂತಿ ಪ್ರಯುಕ್ತ ಶುಕ್ರವಾರದ ರಜೆ ಇತ್ತು, ಸೋಮವಾರ ಸೇರಿಸಿ ನಾಲ್ಕು ದಿನದ ಪ್ರವಾಸವನ್ನು ಪ್ಲಾನ್ ಮಾಡಿಕೊಂಡೆವು, ಮೊದಲಿಗೆ ಡೆಲ್ಲಿ ವರೆಗೆ ಹಾಕಿದ ಪ್ಲಾನ್ ಅನ್ನು ಆಗ್ರಾ ಮತ್ತು ಗ್ವಾಲಿಯರ್ ಗೆ ತಗ್ಗಿಸಿಕ್ಕೊಂಡೆವು.
ರಾತ್ರಿ ೧೦ :೫೫ ರ ಗಾಡಿ ಅದಾಗಿತ್ತು, ಯಾವಾಗಿನಂತೆ ಭಾರತೀಯ ರೈಲ್ವೆ ಮೊನ್ನೇನು ತನ್ನ ಛಾಪನ್ನು ಉಳಿಸಿಕೊಂಡಿತ್ತು, ೩೫ ನಿಮಿಷ ಮೊದಲ ಸ್ಟೇಷನ್ ನಲ್ಲೆ ಲೇಟ್ ಆಗಿ ತಲುಪಿತ್ತು, ಮೂವರು ಪ್ಲಾಟ್ಫಾರ್ಮ್ ನಲ್ಲಿ ನಿಂತು ಹೊಟ್ಟೆ ತುಂಬಿಸಿಕೊಂಡೆವು, ನಮ್ಮಿಂದ ಅಂದು ದೂರವಾದ ಶಮೀಮ, ಸುಜಾತ, ಮತ್ತು ಅಸಾವರಿ ಕುರಿತಾದ ಕೆಲ ಮಾತು ಆಡುತ್ತಿದ್ದಂತೆ, ನಮ್ಮ ರಿಟರ್ನ್ ಟಿಕೆಟ್ ಮಾಡಿಸುವುದರ ಬಗ್ಗೆ ಮಾತು ಬಂದಿತು, ಅಲ್ಲಿ ಇಲ್ಲಿ ಫೋನ್ ಆಯಿಸಿ ಇಬ್ಬರು ಗೆಳೆಯರನ್ನು ಮರುದಿನ ೭ :೪೫ ಕ್ಕೆ ಎದ್ದು ಬುಕ್ ಮಾಡಿಸಲು ಒಪ್ಪಿಸಿದೆವು.(IT ಸೋಮಾರಿಗಳಿಗೆ ವೀಕ್ ಎಂಡ್ ನಲ್ಲಿ ಮುಂಜಾವಾಗುವುದು ೧೨ ರ ಬಳಿಕ !!!!)ಅದಕ್ಕೆ ಬದಲಾಗಿ ಅವರಿಗೆ ಆಗ್ರಾ ಪೇಟದ ವಾಗ್ಧಾನವು ಆಯಿತು.
ರಾಘು ಅದೇ ಸಮಯಕ್ಕೆ ಫೋನ್ ಅಯಿಸಿದ "ನಾನು ಬಸ್ಸ ನಲ್ಲಿದ್ದೇನೆ ಕಣೋ, ನೀನು ನಾಳೆ ಎಷ್ಟು ಹೊತ್ತಿಗೆ ತಲುಪುತ್ತಿಯಾ..?"
ನಾನು "ಅರ್ರೆ, ನಾನು ಕುಂಬ್ಳೆ ಪ್ಲಾನ್ ಸ್ಕಿಪ್ ಮಾಡಿದ್ದೇನೆ, ನಾನು ಈಗ ಗ್ವಾಲಿಯರ್ ಗೆ ಹೋಗುತ್ತಾ ಇದ್ದೇನೆ." ಅವನಿಗೆ ಕೆಲಸದ ಗಡಿಬೀದಿಯಲ್ಲಿ ನನ್ನ ಪ್ರಯಾಣದ ದಿಕ್ಕು ಬದಲಾಯಿಸಿರುವುದನ್ನು ಹೇಳಲು ಮರೆತ್ತಿದ್ದೆ.
ಇಬ್ಬರಿಗೂ ಊರ ಜಾತ್ರೆ ಎಂದರೆ ತುಂಬಾ ಅಚ್ಚು ಮೆಚ್ಚು, ಇಲ್ಲಿವರೆಗೆ ಯಾವತ್ತು ಮಿಸ್ ಮಾಡಿ ಕೊಂಡಿರಲಿಲ್ಲ, (ಸೆಕೆಂಡ್ ಪಿ.ಯು.ಸಿ ಇರುವಾಗ ನಾವು ಬೇಡಿ ಕಟ್ಟೆಯಲ್ಲೇ ಮಾರನೆ ದಿನದ ಲ್ಯಾಬ್ ಪರೀಕ್ಷೆಗೆ ತಯಾರಿ ನಡೆಸಿದ್ದೆವು, ಲಕ್ಷೋಪಲಕ್ಷ ಜನರ ಜಂಗುಳಿಯಲ್ಲಿ, ನೆಟ್ಟ ಹೊಲೋಜನ್ ದೀಪದ ಕೆಳಗೆ ಓದಿದ್ದೆವು, ವಿಶ್ವೇಶ್ವರಯ್ಯ ನವರ ಆಶಿರ್ವಾದವೇನೋ ಇಬ್ಬರಿಗೂ ಆ ಲ್ಯಾಬ್ ನಲ್ಲಿ ಔಟ್ ಆಫ್ ಔಟ್ ಸಿಕ್ಕಿತ್ತು . :)) ಕಳೆದ ವರುಷವು ಇಬ್ಬರು ಕೆಲಸಕ್ಕೆ ಸೇರಿದ ಹೊಸದರಲ್ಲಿ ಮೊದಲ ಊರ ಭೇಟಿಯಲ್ಲಿ ಇಬ್ಬರು ಜಾತ್ರೆಯ ಖುಷಿ ಅನುಭವಿಸಿದ್ದೆವು, ಅದೇ ಬೇಡಿ ಕಟ್ಟೆಯಲ್ಲಿ ಇಬ್ಬರು ಸೇರಿ "ಪ್ರತಿವರ್ಷ ಎಲ್ಲೇ ಇರಲಿ ಇಬ್ಬರೂ ಜಾತ್ರೆಗೆ ಭೇಟಿ ಮಾಡುವೆವು "ಎಂದು ಕೊಟ್ಟ ಮಾತಿನ ನೆನಪಾಯಿತು.
ನಾನು ಅವನಲ್ಲಿ "ಸಾರೀ ಕಣೋ, ಬರಲಾಗುತ್ತಿಲ್ಲ, ಹಿಂದೆ ಹೇಳಿದಂತೆ ಆದಿತ್ಯ, ಅವನ ಅಣ್ಣನ ಮದುವೆಯ ಗೌಜಿಯಲ್ಲಿದ್ದಾನೆ , ನನಗೆ ಅಂದುಕ್ಕೊಂಡಂತೆ ಒಂದು ವಾರದ ರಜೆ ಸಿಗಲಿಲ್ಲ , ಆದಕಾರಣ ಒಂದು ದಿನದ ರಜೆ ಹಾಕಿ ಆ ಮದುವೆಗೆ ಹೋಗುತ್ತಾ ಇದ್ದೇನೆ." ಅಂದೆ.
ಅವನು "ಹುಂ, ಸರಿ ಸುತ್ತಾಡಿ ಬಾ... ಹ್ಯಾಪಿ ಜರ್ನಿ" ಅನ್ನುತ್ತಿದ್ದಂತೆ ಕರೆ ಕಟ್ ಆಯಿತು.
ಮಾತು ಮುರಿದದಕ್ಕೆ ತುಂಬಾನೆ ಬೇಜಾರಾಯಿತು,ಟ್ರೈನ್ ಹತ್ತಿದವನೇ ಈ ಬಗ್ಗೆಯೇ ಮನ ಕನವರಿಸುತಿತ್ತು. ಜೊತೆಯಲ್ಲಿದ್ದ ರಾಜೇಶ್ ಮತ್ತು ಅಮಿತ್ ನನ್ನ ಔಟಾದ ಮೂಡ್ ನೋಡಿ, ಏನೆಂದು ವಿಚಾರಿಸಲು ನಾನು ಏನಿಲ್ಲ ಅಂದೆ, ಅವರಲ್ಲಿ ನನ್ನ ಊರಿನ ಈ ಪ್ರಸಂಗದ ಬಗ್ಗೆ ಮಾತಾಡಿದರೆ "ಜ್ಯಾದ ಸೆಂಟಿ ಮತ್ ಹೋ ಯಾರ್ "ಎನ್ನುತ್ತಾರೋ ಎಂದು ಸುಮ್ಮನಾದೆ. ಮೊಬೈಲ್ನಲ್ಲಿ ಹಿಂದಿನ ವರುಷ ಜಾತ್ರೆಯಸಮಯದಲ್ಲಿ ರೆಕಾರ್ಡ್ ಮಾಡಿದ ನಮ್ಮ ಭಜನಾ ಮಂಡಳಿಯ ಭಜನೆ ಆಲಿಸುತ್ತಾ, ಕಳೆದ ವರ್ಷದ ಫೋಟೋಗಳನ್ನು ನೋಡುತ್ತಾ ಕಂಬಳಿ ಹೊದ್ದು ಕೊಂಡೆ.
ಶುಕ್ರವಾರ ಕಣ್ಣು ಬಿಟ್ಟಾಗ ಟ್ರೈನ್ ನಾಗ್ಪುರ್ ಸ್ಟೇಷನ್ ನಲ್ಲಿತ್ತು. ಈಗ ಮನಸ್ಸು ಪುನಃ ಒಂದು ವರುಷ ಹಿಂದೆ ಹೋಯಿತು, ಇಲ್ಲಿ ಕಳೆದ ನನ್ನ ವೃತ್ತಿ ಜೀವನದ ಮೊದಲ ೨ ತಿಂಗಳು ನೆನಪಾದವು , ಇಲ್ಲಿರುವ ಗೆಳೆಯರಿಗೆ ಫೋನ್ ಆಯಿಸಿದೆ, ಅವರು ನೀನು ಮೊದಲೇ ತಿಳಿಸಿದ್ದರೆ ತಾವು ಸ್ಟೇಷನ್ ನಲ್ಲಿ ಬೇಟಿ ಯಾಗುತ್ತಿದ್ದೆವು ಅಂದರು ಅದಕ್ಕೆ ನಾನು "ಜ್ಯಾದ ಸೆಂಟಿ ಮತ್ ಹೋ ಯಾರ್ !!!" ಅಂದೆ. ಅಲ್ಲೇ ಗಾಡಿಯಲ್ಲಿ ಇದ್ದ ನಾಗ್ಪುರ್ ನ ಸ್ಪೆಷಲ್ ಓರಂಜ್ ಖರೀದಿಸಿದೆ. ನಾಗ್ಪುರ್ ನಲ್ಲಿದ್ದ ಆ ೨ ತಿಂಗಳು ಇದರ ಸ್ವಾದ ಅಸ್ವಾದಿಸಿರಲಿಲ್ಲ, ನಾವಿದ್ದ ಆ ಋತುವಿನಲ್ಲಿ ಬೆಳೆ ಬಂದಿರುವುದಿಲ್ಲ ಅಂದಿದ್ದರು ಅಂದು ಇಲ್ಲಿನ ಗೆಳೆಯರು.ಇದೇ ಅರಳು ಮರಳಲ್ಲೇ ಟ್ರೈನ್ ಹತ್ತಿ ಕೊಂಡೆ.
ಬಾಗ್ ನಲ್ಲಿದ್ದ "ಐ ಟು ಹಾಡ್ ಲವ್ ಸ್ಟೋರಿ" ಓದಲು ಶುರು ಮಾಡಿಕೊಂಡೆ. ಅಪ್ಪರ್ ಬರ್ತ್ನಲ್ಲಿ ಅಮಿತ್ ಮತ್ತು ರಾಜು ಇನ್ನು ಗೊರಕೆ ಹೊಡೆಯುತ್ತಿದ್ದರು,ಟ್ರೈನ್ ಮುಂದೆ ಮುಂದೆ ಸಾಗುತಿತ್ತು, ಸುಂದರ ನಿರೂಪಣೆಯುಳ್ಳ ಕಥೆ ನನ್ನನ್ನು ಅದರಲ್ಲೇ ಲೀನ ಗೊಳಿಸಿತು.
೨ ಕಂತು ಗಳನ್ನೂ ಓದಿಮುಗಿಸಿದ್ದೆ, ಒಮ್ಮೆಲೇ ಓದಿದ ಸಾಲುಗಳನ್ನು ಮತ್ತೆ ಮತ್ತೆ ಒದಲಾರಂಬಿಸಿದೆ, ಎದೆಬಡಿತ ಒಮ್ಮೆಲೇ ಹೆಚ್ಚಿತು, ಮೇಲೆ ನೋಡಿದೆ ಅಮಿತ್, ರಾಜು ಇನ್ನೂ ಗಾಡ ನಿದ್ದೆಯಲ್ಲಿದ್ದಾರೆ, watch ನೋಡಿದೆ ೧ ಗಂಟೆ ಆಗಿ ೧೨ ನಿಮಿಷ ಸೆಕೆಂಡ್ ಮುಳ್ಳಿನ ಚಲನೆಯ ಸದ್ದು ಕೇಳುತಿತ್ತು, ಸುತ್ತಲು ಕಣ್ಣಾಡಿಸಿದೆ, ನಮ್ಮ ಬರ್ಥ್ನಲ್ಲಿ ನನ್ನನ್ನು ಬಿಟ್ಟರೆ ಯಾರು ಇರಲಿಲ್ಲ, ಎದೆಬಡಿತ ಇನ್ನು ಹೆಚ್ಚುತ್ತಾ ಹೋಯಿತು, ಕಂಪಾರ್ಟ್ಮೆಂಟ್ ಕೊನೆಯಲ್ಲಿ ಕೇಳುತಿದ್ದ ದರ್ಪದನಿಯ ಹಾಡು ಹತ್ತಿರ ಬಂದಂತೆ ಹಣೆಯಲ್ಲಿ ಒಂದೊಂದಾಗಿ ಬೆವರಹನಿ ಮೂಡಲಾರಂಬಿಸಿತು.
ಬೆಂಗಳೂರಿನಿಂದ ನಾಗ್ಪುರ್ ಗೆ ಪ್ರಯಾಣಿಸುತ್ತಿದ್ದಾಗ ಆದ ಅನುಭವ ಇವತ್ತು ಮತ್ತೆ ಪುನಃ ಆವರ್ತಿಸುವಂತಾಯಿತು, ಕೈಯಲ್ಲಿದ್ದ ಕಾದಂಬರಿ ಸಾಲುಗಳ ಮೇಲಿದ್ದ ನನ್ನ ಕೈಬೆರಳು ಕಂಪಿಸಲಾರಂಬಿಸಿತು, ಬ್ಯಾಗ್ ನಿಂದ ಕಂಬಳಿ ತೆಗೆದು ಪುನಃ ಹೊದ್ದು ಮಲಗುವ ಅಂದುಕ್ಕೊಂಡೆ, "ಬೇಡ ಹೆದರಬೇಡ ಗಂಡಸಾಗಿ ಶಿಖಂಡಿಗೆ ಹೆದರುತ್ತಿಯಾ?" ಎಂದು ಒಳಮನ ನನ್ನನ್ನು ಪ್ರಶ್ನಿಸಿತು, ಅದದಾಗಲಿ ಎಂದು ನಾನು ಕೈಯಲ್ಲಿದ್ದ ಕಾದಂಬರಿಯನ್ನು ಒದಲಾರಂಬಿಸಿದೆ. ಎಡಗೈ ಹಿಂದಿನ ಜೇಬಿನಲ್ಲಿದ್ದ ಪರ್ಸ್ ತೆಗೆದು ಅದರಲ್ಲಿದ್ದ ೫ ರುಪಾಯಿಯ ನಾಣ್ಯ ತೆಗೆದು ಅವನ/ ಅವಳ ಭೇಟಿಗೆ ನನ್ನನ್ನು ನಾನು ಸನ್ನದ್ಧ ಮಾಡಿಕ್ಕೊಂಡೆ. ಹಿಂದಿನ ಪ್ರಯಾಣದಂತೆ ಅವರ ಬಾಯಿಂದ ಶಪಿಸಿಕೊಳ್ಳಲು ಇಷ್ಟವಿರಲಿಲ್ಲ.
ದನಿ ಇನ್ನೂ ಹೆಚ್ಚುತ್ತಾ ಹೋಯಿತು.ಜೊತೆಗೆ ನನ್ನ ಎದೆಬಡಿತವೂ, ಅವನ ಹೆಜ್ಜೆ ಹಿಂದಿನ ಬರ್ತ್ ನಿಂದ ನನ್ನ ಬರ್ತ ಗೆ ಇಡುತ್ತಿದ್ದಂತೆ, ಕಣ್ಣು ಮುಚ್ಚಿಕ್ಕೊಂಡೆ ಅವನು ಜೀವನದ ನೈಜತೆಯ ಕುರಿತಾದ ಒಂದು ಹಾಡು ಹಾಡುತ್ತಿದ್ದ, ೨೦ ಸೆಕೆಂಡ್ ಆದರೂ ಮೈ ಮುಟ್ಟದೇ ಅವನದೇ ಧಾಟಿಯಲ್ಲಿ ಹಾಡು ಮುಂದುವರೆಸಿದ್ದ, ನಾನು ಮೆಲ್ಲನೆ ಕಣ್ಣು ತೆರೆದೆ, ಇಲ್ಲಿ ನನ್ನ ಆಲೋಚನೆ ತಪ್ಪಾಗಿತ್ತು, ಅವನು ಸಭ್ಯ ಕುರುಡ ಅಂಗವಿಕಲನಾಗಿದ್ದ. ಹೃದಯ ಮತ್ತೆ ತನ್ನ ನೈಜ ಹಿಡಿತ ಪಡಕ್ಕೊಂಡಿತು. ಅವನ ಬಾಯಿಯಿಂದ ಬಂದ ಸಾಲುಗಳು ನನ್ನನ್ನು ಕೈಯಲ್ಲಿದ್ದ ೫ ರುಪಾಯಿಯನ್ನು ಪುನಃ ಜೇಬಿನಲ್ಲಿ ಹಾಕುವಂತೆ ಮಾಡಿತು, ನಮ್ಮನ್ನು ಹೆದರಿಸಿ ಹಣ ದೋಚುವ ಶಿಖಂಡಿ ಗಳಿಗಿಂತ ಈ ಬಡವನ ಪಾಲಿಗೆ ಹತ್ತು ರುಪಾಯಿ ಹೆಚ್ಚು ಸೂಕ್ತ ಅಂದುಕ್ಕೊಂಡು ಕಿಸೆಯಿಂದ ಹತ್ತು ರುಪಾಯಿಯ ನೋಟ್ ಅನ್ನು ಅವನ ಜೊತೆಯಲ್ಲಿದ್ದ ಸಣ್ಣ ಬಾಲಕನ ಕೈಯಲ್ಲಿ ಇಟ್ಟೆ.
ಟ್ರೈನ್ ಹಾಗೆ ಮುಂದುವರಿಯುತ್ತ ಸಾಗಿತು, ಕಾದಂಬರಿಯಲ್ಲಿನ ಆಸಕ್ತಿ ಗ್ವಾಲಿಯರ್ ತಲುಪಿದ್ದೆ ಗೊತ್ತಾಗಲಿಲ್ಲ.ರಾಜು ಹೇಳಿದಂತೆ ೧೨ ಗಂಟೆ ಯ ಮೊದಲೇ ತಲುಪಿದ್ದೆವು ಸ್ಟೇಶನ್, ಅಲ್ಲಿನ ಗಡಿಯಾರ ಆಗ "೨೩:೫೯:೧೬ " ಎಂದು ತೋರಿಸುತ್ತಾ ನಮ್ಮನ್ನು ನಗರಕ್ಕೆ ಸ್ವಾಗತಿಸಿತು. ಹಿಂದೆಲ್ಲಾ ಆಫೀಸಿನಲ್ಲಿ "ರಾಜು ಭಾಯ್ ಕಾ ಜಲ್ವಾ!!! " ಎಂಬ ಮಾತು ಆಡುತ್ತಿದ್ದೆವು ಇಲ್ಲಿ ಇಳಿಯುತ್ತಿದ್ದಂತೆ ಅವರ ಜಲ್ವಾ (ಮೋಡಿ ) ಒಂದೊಂದಾಗಿ ಕಾಣಲಾರಂಭಿಸಿತು!!!!
ಸ್ಟೇಶನ್ ಗೆ ಬಂದ ರಾಜುನ ಗೆಳೆಯ ಭರತ್ ಪಕ್ಕದಲ್ಲಿನ ಹೋಟೆಲ್ಗೆ ಕರಕ್ಕೊಂಡು ಹೋದ, ೧೨ ಆದರು ಪೇಟೆಯಲ್ಲಿ ವ್ಯಾಪಾರ ಸಾಗಿತ್ತು.ಕೂತವರಿಗೆ ಏನೂ ವಿಚಾರಿಸದೆ ಸಪ್ಲೇಯರ್ ರಾಜುವಿನ ಪ್ರಿಯ ಪನ್ನೀರ್ ಮತ್ತು ಮಶ್ರೂಂ ನ ಸಬ್ಜಿ ಮತ್ತು ಅವರ ನೆಚ್ಚಿನ ಬಟರ್ ನಾನ್ ತಂದಿಟ್ಟ, ಇದನ್ನು ನೋಡುತ್ತಿದ್ದಂತೆ ನಾವಿಬ್ಬರು "ರಾಜು ಭಾಯ್ ಕಾ ಜಲ್ವಾ!!!" ಅಂದ್ವಿ.ರಾಜು ಆದಿತ್ಯ ಗ್ವಾಲಿಯರ್ ನಲ್ಲೇ ಇಂಜಿನಿಯರಿಂಗ್ ಮುಗಿಸಿದ್ದರು, ಆ ಸಮಯದಲ್ಲಿ ಅವರು ಇಲ್ಲಿ ಬರುತ್ತಿದ್ದರು ಮತ್ತು ಇಲ್ಲಿ ಇವನ್ನೇ ತಿನ್ನುತ್ತಿದ್ದರು ಎನ್ನುವ ನೆನಪು ಸಪ್ಲಾಯ್ ಮಾಡಿದ ಆ ರಾಮುನ ನಗೆಯಲ್ಲಿ ಗೋಚರಿಸುತ್ತಿತ್ತು.
ಹಿಂದಿನ ರಾತ್ರಿಯಿಂದ ಏನೂ ತಿಂದಿರಲಿಲ್ಲ, ಹಿಂದಿನ ಟ್ರೈನ್ ಪ್ರಯಾಣದ ಅಸ್ವಾದಿಷ್ಟ ತಿಂಡಿ ಈ ಬಾರಿ ತಿನ್ನದಂತೆ ಬಾಯಿಗೆ ಬೇಲಿ ಹಾಕಿತ್ತು. ಹಸಿವು ಹೆಚ್ಚಿತ್ತು ಜೊತೆಗೆ ೩ ವರುಷದ ಬಳಿಕ ತನ್ನಲ್ಲಿಗೆ ಬಂದ ಹಳೆ ಗಿರಾಕಿಗೆ ಆ ಬಾಣಸಿಗ ತನ್ನ ಎಲ್ಲಾ ಅನುಭವ ಧಾರೆ ಎರೆದು ನಮಗೆ ಉಣಬಡಿಸಿದ್ದ, ತಂದಿಟ್ಟ ೧೨ ನಾನ್ ಅನ್ನು ಮೂವರೂ ಸೇರಿ ಮುಗಿಸಿದೆವು. ಹೊಟ್ಟೆ ತುಂಬಿದ ಬಳಿಕ ಭರತ್ ನ ಮನೆಗೆ ರಿಕ್ಷಾ ಹಿಡಿದು ಕುಳಿತುಕ್ಕೊಂಡೆವು, ಸಮಯ ೧ ದಾಟಿದ್ದರು ಕೆಲವೊಂದು ಅಂಗಡಿಗಳು ತೆರೆದಿದ್ದವು, ಸಿಗ್ನಲ್ ಲೈಟ್ ಇನ್ನೂ ಹಸಿರು ಕೆಂಪಿನ ಕಣ್ಣ ಮುಚ್ಚಾಲೆ ಆಡುತ್ತಿತ್ತು.ಮಂಗಳೂರಿನಲ್ಲಿ ಬೆಳೆದ ನನಗೆ ೯ ಗಂಟೆ ಗೆ ಶೂನ್ಯ ಪೇಟೆ ನೋಡಿ ಅನುಭವ, ಹೈದರಾಬಾದ್ ಬೆಂಗಳೂರಿನಂತ ದೊಡ್ಡ ನಗರಗಳು ತನ್ನ ೨೪ ಗಂಟೆ ಜಾಗರಣೆ ನಡೆಸುತ್ತವೆ, ಆದರೆ ಒಂದು ಮದ್ಯಮ ಗಾತ್ರದ ನಗರ ಈ ತಡ ರಾತ್ರಿಯಲ್ಲೂ ಕಾರ್ಯನಿರ್ವಹಿಸುವುದು ಕಂಡು ತುಂಬಾ ಅಚ್ಚರಿ ಯಾಯಿತು.
ಮುಂದುವರೆಯುವುದು ......
ನಿಮ್ಮ
ಕಾಮತ್ ಕುಂಬ್ಳೆ