Friday, August 5, 2011

ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ

ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ

ನೀಲಸಾಗರದ ಕಿನಾರೆಯಲಿ, ಹಸಿರು ಗಿರಿಯ ನೆರಳಿನಲಿ
ಬಚ್ಚಿಟ್ಟ ಮನಸ ಗುಟ್ಟು ಏಕಾಂತದಲಿ ಕೇಳಲು
ಸೇರಿ ಹೋದೆನು ನಾ ನೀಲಿ ಬಾನಲಿ
ಕಣ್ಣಂಚಿನ ಕಾಂತಿಯಲಿ, ನಾವರಿವ ಹಳೇ ಬಾಷೆಯಲಿ
ಕೂಡಿಟ್ಟ ಕನಸ ಗಂಟು ಮಾತಾಗಿ ಮೂಡಲು
ಲೂಟಿಯಾದೆನು ನಾ ತಿಳಿ ಸಂಜೆಯಲಿ || ಕನಸು ನನಸಿನ ನಡುವಿನ ಹಾದಿಯ||

ಆಹ್ವಾನ ನೀಡದೆ ತಲ್ಲಣದಿ ಬಂದ ಆಹ್ಲಾದಕ ಪುಳಕಕೆ
ಕೈಯಲಿ ಕೈಹಿಡಿದು ಹರಿವನೀರಿಗೆ ಬಣ್ಣ ಬಳಿಯಲು
ಕರಗಿ ಹೋದೆನು ನಿನ್ನ ಕಂಗಳಲಿ
ಆಸ್ಪದ ಕೊಡದೆ ವಿರಹಕೆ, ತಂದ ಉನ್ಮಾದಕ  ಭಾವಕೆ
ಜೊತೆಯಲಿ ಕೊಡೆಹಿಡಿದು ಸುರಿವಮಳೆಗೆ ಚಳಿ ಹಿಡಿಸಲು
ತೆಲಿ ಹೊದೆನು ಬೆಳದಿಂಗಳಲಿ  || ಕನಸು ನನಸಿನ ನಡುವಿನ ಹಾದಿಯ||

ಇನ್ನೆಂದು ಸಂಗಾತಿಯು ನೀನೆಂದು ಆಣೆ ಮಾಡಿರುವೆ
ಜನುಮ ಜನುಮಕೂ ಮುಗಿಯದ ಮನಸಿನ ಒಪ್ಪಂದಕೆ
ಕಾಣಿಕೆ ಯಾದೆನು ನಾ ನಿನಗೆ
ಜಲ್ಲೆಂದು ಸದ್ದಾಗಲು ನೀನೆದ್ದು ಹೋದೆ ಒಂಟಿಯಾಗಿ
ದಿನ ದಿನವೂ ಮುಗಿಯದ ಕನಸಿನ ಪಂದ್ಯಕೆ
ವಿರಹಿಯಾದೆನು ನಾ ಕೊನೆಗೆ || ಕನಸು ನನಸಿನ ನಡುವಿನ ಹಾದಿಯ||


ನೀ ಬರುವ ಬೀದಿಯ ಬಿಂದಿಗೆಯಲಿ ತುಂಬಿ ತಂದ ಬೆಳದಿಂಗಳಿಂದ ತೊಳೆದಿರುವೆ
ನೀ ಬರುವ ಮೊದಲೇ ಅದರ ಬದಿಯಲಿ ಕಿತ್ತು ತಂದ ತಾರೆಯ ರಂಗೋಲಿ ಬಿಡಿಸಿರುವೆ 
ಕನಸು ನನಸಿನ ನಡುವಿನ ಹಾದಿಯ ದಾಟಿ ನೀ ಬರಬಾರದೇ
ಮನಸು ಮನಸಿನ ನಡುವಿನ ಕಿಟಕಿಯ ನೀ ತೆರೆಯ ಬಾರದೇ

ಕಾಮತ್ ಕುಂಬ್ಳೆ

2 comments:

  1. ಇಂತಹ ಕವಿತೆಯ ಓದಿ ಅದೆಷ್ಟು ದಿನವಾಯಿತೋ ನಾ ಕಾಣೆ
    ಒಳ್ಳೆಯ ರೀತಿಯಲ್ಲಿ ಶೃಂಗರಮಯವಾಗಿ ಎಲ್ಲೂ ಭಾಷೆಯ ಪ್ರಯೋಗಕ್ಕೆ ಲೋಪ ಬರದ ರೀತಿಯಲ್ಲಿ ರಚಿಸಿದ ಕವಿತೆ
    ಮನಸಿಗೆ ಮುದ ನೀಡಿದೆ
    ವೆಂಕಿ... ನಿಮಗೆ ಹೃತ್ಪೂರ್ವಕ ಧನ್ಯವಾದಗಳು

    ReplyDelete
  2. ವಿನೀತ್ ಧನ್ಯವಾದಗಳು

    ReplyDelete