Thursday, August 11, 2011

ಕಿಚ್ಚು :: ಭಾಗ ೭೧೭


ಬಸ್ಸನಲ್ಲಿ ಗುರುತು ಪತ್ತೆ ಹಚ್ಚದ ಯಶೋದಮ್ಮ ಬಸ್ಸ್ ನಿಂದ ಇಳಿಯುತ್ತಲೇ ನನ್ನನ್ನು ಗುರುತಿಸಿದರು, ನನ್ನನ್ನು ನೋಡುತ್ತಲೇ "ಮಗೂ ನಿನ್ನ ಬೆನ್ನ ಹಿಂದೆ ಏನು ನಡೆದಿದೆ ಎಂದು ತಿಳಿದಿದ್ದಿಯಾ? ನೀನು ಸಾಧನೆ ಮಾಡಿರುವೆ ಅಂದು ಕೊಂಡಿರಬಹುದು ಆದರೆ ನೀನು ನಿನ್ನ ಜೀವನವನ್ನೇ ಸುಟ್ಟು ಬಿಟ್ಟೆ, ಆ ಅಮೂಲ್ಯ ಜೀವನ ಇನ್ನೆಂದು ಬರಲಾರದು, ನೀನು ಜೀವನದ ಮೊದಲ ಆಟದಲ್ಲೇ ಸೋತು ಬಿಟ್ಟೆ, ಇನ್ನು ನೀನು ಯಾವುದೇ ವಿಧವಾದ ವಿಧಿಯಾಟವನ್ನು ಎದುರಿಸಲು ನಿಶ್ಯಕ್ತ ನಾಗಿರುವೆ, ಮನೆಯವರು, ಸಮಾಜ ಮತ್ತು ಪರಿಸ್ಥಿತಿ ಎಲ್ಲಾ ನಿಮ್ಮಿಬ್ಬರ ಜೀವನದ ಮೇಲೆ ನಿರಂತರ ವಾಗಿ ಜ್ವಾಲೆಯ ಚೆಂಡನ್ನು ಎಸೆಯುತ್ತಲೇ ಇರುತ್ತದೆ, ಅದನ್ನು ಎದುರಿಸುವ ಸಾಮರ್ಥ್ಯ ನಿಮ್ಮಿಬ್ಬರಲ್ಲಿ ಇಲ್ಲ . ಕನಸು ಕಾಣುವ ಹೊತ್ತಲೇ ಮನಸ್ಸಿನ ಬಯಕೆಗೆ ಮನಸೋತಿರಿ , ಆದರೆ ಇನ್ನು ಮನಸು ಅಂದುಕೊಂಡರು ಈ ಸವಿ ದಿನದ , ಸವಿ ಬಾಳಿನ ಕನಸು ಬಿಳಲಾರದು. ನೀವು ಮನೆಗೆ ಹೋಗ ಬೇಡಿ, ಅಲ್ಲಿ ಎಲ್ಲ ಹಸಿದ ಹೆಬ್ಬುಲಿಗಳಾಗಿದ್ದರೆ , ನೀವು ಅವರ ಕೈಗೆ ಸಿಕ್ಕರೆ ನಿಮ್ಮನ್ನು ಕೊಂದು ತಮ್ಮ ದ್ವೇಷ ಸಾಧಿಸುತ್ತಾರೆ, ಇಲ್ಲಿಂದಲೇ ನೀವು ನಿಮ್ಮ ಕನಸಿನೂರಿನ ಕನಸಿನ ಪಯಣಕ್ಕೆ ಮರಳಿ, ನೀವು ಸಿಕ್ಕಿರುವ ವಿಚಾರ ನಾನು ಯಾರಲ್ಲಿ ಹೇಳುವುದಿಲ್ಲ, ಹೋಗಿ ...."

ಅವರ ಕಾಳಜಿಯನ್ನು ನೋಡಿ ನಾನು "ಯಶೋದಮ್ಮ , ಇಲ್ಲ ನಾನು ಯಾರು ಏನು ಹೇಳಿದರೂ ಕೇಳಲು , ಅವರು ಕೊಡುವ ಶಿಕ್ಷೆ ಅನುಭವಿಸಲು ತಯಾರಿದ್ದೇನೆ, ಎಲ್ಲದಕ್ಕೂ ನಾವು ಮಾಡಿರುವ ತಪ್ಪೇ ಕಾರಣ, ತಂದೆ-ತಾಯಿಯನ್ನು ಪರೋಕ್ಷವಾಗಿ ನಮ್ಮ ಪ್ರೀತಿ ಬಲಿ ತೆಗೆದು ಕೊಂಡಿತು ಕನಿಷ್ಠ ಪಕ್ಷ ಅವರ ೧೩ ನೇ ದಿನದ ಕಾರ್ಯ ಮಾಡಿ ನನ್ನ ಋಣ ಕಮ್ಮಿ ಮಾಡಿ ಕೊಳ್ಳುತ್ತೇನೆ."

ಅದಕ್ಕೆ ಅವರು "ಮತ್ತೆ ನಿನ್ನಿಷ್ಟ, ಆದರೆ ಅಲ್ಲಿ ಹೋದರೆ ನಿನಗೆ ಎಲ್ಲರ ಅವಾಚ್ಯ ಶಬ್ದ ಕೇಳ ಬೇಕಾಗಬಹುದು, ಆ ಮಾತುಗಳು,ಇಲ್ಲ ಅವರು ಕೊಟ್ಟ ಶಿಕ್ಷೆಯನ್ನು ನೀವಿಬ್ಬರು ಜೀವನ ಪೂರ್ತಿ ಅನುಭವಿಸ ಬೇಕಾಗಿ ಬರಬಹುದು ಆದಕಾರಣ ನೀವು ಅಲ್ಲಿ ಹೋಗದೆ ಇರುವುದು ಸೂಕ್ತ "
ಅವರು ಏನೆಂದರು ನಾವು ಮನೆಗೆ ಹೋಗಲು ನಿರ್ಧರಿಸಿ ಆಗಿತ್ತು ಮೂವರು ಸುಮಾರು ೧ ಮೈಲು ನಡೆದಿರಬಹುದು, ದಾರಿ ಕವಲಾಯಿತು, ಯಶೋದಮ್ಮನ ಮನೆ ಬಲಬದಿಯ ಕವಲಲ್ಲಿ, ನಾವಿಬ್ಬರು ಎಡಬದಿಯ ಕವಲು ಹಿಡಿದೆವು, ಅವರು ನಮ್ಮಲ್ಲಿ "ಸರಿ ಕಣಪ್ಪ ನಿಮ್ಮ ದಾರಿ ನೀವು ನೋಡಿ ಕೊಳ್ಳಿ."ಅಂದು ತಮ್ಮ ದಾರಿ ಹಿಡಿದರು.
ಡಾಮರು ಕಾಣದ, ದೃಷ್ಟಿ ಹಾಯಿಸಿದಷ್ಟು ದೂರ ಸಾಗುವ ಒಂಟಿ ರಸ್ತೆ, ಸೂರ್ಯನ ಪಯಣ ಆಗಲೇ ನಿಧಾನವಾಗಿತ್ತು. ವಸುಂದರ ಇಲ್ಲಿವರೆಗೆ ಇಷ್ಟು ನಡೆದಿರಲಿಕ್ಕಿಲ್ಲ, ಹುಟ್ಟಿನಿಂದ ಕಾರ್ ನಲ್ಲಿ ತಿರುಗಾಡುತ್ತಿದ್ದ ಶ್ರೀಮಂತರ ಮನೆ ಹುಡುಗಿಯನ್ನು ಸುಡುವ ಬಿಸಿಲಿನಲ್ಲಿ ನಾನು ನಡೆಸಿಕೊಂಡು ಹೋಗುತಿದ್ದೆ.ಮದ್ಯಾಹ್ನದ ಸಮಯವಾಗಿರುವುದರಿಂದ ದಾರಿ ಮದ್ಯ ಯಾವನೇ ಪರಿಚಯದವನು ಸಿಗದ ಕಾರಣ ಕಿವಿ ಮಾಲಿನ್ಯವಾಗದೆ ಉಳಿದು ಹೋಯಿತು, ಇಲ್ಲಂತಾದರೆ ಮುಂದಿನ ೧ ಮೈಲು ೧೦೦ ಮೈಲಿನ ದೂರವಾಗುತಿತ್ತು. ನಡೆ ನಡೆಯುತ್ತಲೇ ನನ್ನ ಮನೆ ತಲುಪಿದೆವು.
ಕಲ್ಲು, ಮಣ್ಣಿನ ಗೋಡೆಗೆ ಸೆಗಣಿಯ ಬಣ್ಣ, ಒಂದು ಬದಿಯಲ್ಲಿ ಹಂಚಿನ ಮಾಡು , ಹಣವಿಲ್ಲದೆ ಇನ್ನೊಂದು ಬದಿಯಲ್ಲಿ ಅಜ್ಜನ ಕಾಲದಲ್ಲಿ ಹಾಸಿದ್ದ ಮುಳಿ ಆಗಲೋ ಇಗಲೋ ಬೀಳುವಂತಿತ್ತು. ಸಣ್ಣದಾದ ಅಂಗಳ, ಅದರಲ್ಲಿ ಒಡೆದು ಹೋದ ಚೆಟ್ಟಿಯೇ  ತುಳಸಿ ಕಟ್ಟೆ, ಅದರ ಪಕ್ಕದಲ್ಲಿ ತಿಂಗಳುಗಳಿಂದ ಎಣ್ಣೆ ಇಲ್ಲದೆ ಬಿದ್ದ ಒಣ ಹಣತೆ, ಇದನೆಲ್ಲ ನೋಡುತ್ತಿದ್ದಂತೆ ವಸುಂದರನಿಗೆ ಯಾವ ನರಕಕ್ಕೆ ಬಂದು ಬಿದ್ದೇನು ಎಂದೆನಿಸಿರಬಹುದು, ಅವಳು ನನ್ನಲ್ಲಿ "ಇದುವೇ ನಿಮ್ಮ ಮನೆ?" ಎಂದು ಕೇಳಿದಳು.
ನಾನು "ನಮ್ಮ ಮನೆ ಅನ್ನು , ನಾವಿನ್ನು ಇಲ್ಲೇ ಇರಬೇಕಾದದ್ದು" ಅಂದೆ.

ಪಾಪ ವಸುಂದರ ಅವರ ಮನೆಯ ಕೆಲಸದವರ ಬಚ್ಚಲು ಇದಕ್ಕಿಂತ ಚೊಕ್ಕ ಮತ್ತು ಶುಬ್ರವಾಗಿರುವುದನ್ನು ನೋಡಿ ಬೆಳೆದವಳು, ಈ ಕೋಳಿ ಗೂಡನ್ನು ತನ್ನ ಮನೆ ಎಂದು ಸ್ವೀಕರಿಸುವಲ್ಲಿ ಕಷ್ಟವಾಯಿತು.
ನಾನು ಮುಳ್ಳಿನ ಬೇಲಿಯ ನಡುವಿನ ಕಂಗಿನ ಗೇಟ್ ತೆಗೆದು ಒಳ ನಡೆದೆ. ಮನೆಯಲ್ಲಿ ಆಗಲೇ ದೊಡ್ದವರೆನಿಸಿದವರು ಬಂದಾಗಿತ್ತು, ತಮ್ಮ ವಸಂತ ಕ್ರಿಯೆಗೆ ಮಡಿಯಲ್ಲಿ ಕೂತಾಗಿತ್ತು. ನಾನು ಅಂಗಳ ದಾಟಿ  ಜಗಲಿ ಮೇಲೆ ಹೆಜ್ಜೆ ಇಟ್ಟೆ ನನ್ನ ಹಿಂದೆ ವಸುಂದರ ನನ್ನ ನೆರಳಂತೆ ಸದ್ದಿಲದಂತೆ ಬರುತಿದ್ದಳು, ಹೊಟ್ಟು ಬಿಡುತ್ತ ಅರ್ದ ಜೀವ ವಾಗಿರುವ ಮಾವಿನ ಮರದ ಬಾಗಿಲು ಮೆಲ್ಲನೆ ಸರಿಸಿದೆ, ಅಲ್ಲೇ ಕುಳಿತಿದ್ದ ಇಷ್ಟು ವರುಷ ನಮ್ಮಲ್ಲಿ ದ್ವೇಷ ಸಾದಿಸುತಿದ್ದ ತಂದೆಯವರ ಅಣ್ಣ ಅಂದರೆ ನನ್ನ ದೊಡ್ಡಪ್ಪನನ್ನು ಕಂಡೆ.

ನಮ್ಮಿಬ್ಬರನ್ನು ನೋಡುತಿದ್ದಂತೆ ಅವರು ನನ್ನಲ್ಲಿ  "ಒಳಗೆ ಪ್ರವೇಶಿಸ ಬೇಡಿ , ನೀನು ಎನ್ನಂದು ಕೊಂಡಿದ್ದಿಯಾ ಇಲ್ಲಿ ಯಾರು ಹಿರಿಯರಿಲ್ಲ ,ನಡೆದದ್ದೇ ದಾರಿ ಅಂದು ಕೊಂಡಿದ್ದಿಯಾ ?ಅಪ್ಪನನ್ನು ಬಲಿ ತೆಗೆದು ಕೊಂಡಿ, ಇನ್ನು ನಮ್ಮ ಹಿಡಿ ಕುಟುಂಬವನ್ನೇ ಬಲಿ ತೆಗೆದು ಕೊಳ್ಳುವೆಯಾ?"ನನಗೆ ಏನು ಹೇಳ ಬೇಕಂತ ತಿಳಿಯಲಿಲ್ಲ, ಅವರು ನನ್ನನ್ನು ಅತ್ತ ಸರಿಸುತ್ತ ಹಿಂದೆ ನಿಂತ ವಸುನ ಕತ್ತಿಗೆ ಕೈ ಹಾಕಿ "ಎಂಥ ಮಾಯಾಂಗನೆ ಕಣಮ್ಮ ನೀನು, ಬಂಗಾರದಂತ ಕುಟುಂಬವನ್ನೇ ಸುಟ್ಟು ಬಿಟ್ಟಿಯಲ್ಲೇ ? ಇವನ ಕೈ ಹಿಡಿದದ್ದೇ ಹಿಡಿದದ್ದು ಹಿಡಿ ಕುಟುಂಬವನ್ನು ಸರ್ವ ನಾಶಕ್ಕೆ ತಳ್ಳಿದೆಯಲ್ಲಾ? ನಾವು ಯಾವ ತಪ್ಪು ಮಾಡಿದೆವೆಂದು ಈ ಬಗೆಯ ಶಿಕ್ಷೆ ನೀ ನೀಡಿದ್ದು ? ಬರುವ ಕೋಪಕ್ಕೆ ನಿನ್ನನ್ನು ಇಲ್ಲೇ ಕತ್ತು ಹಿಸುಕಿ ಸಾಯಿಸ ಬೇಕು" ಎನ್ನುತ್ತಾ ಗಟ್ಟಿಯಾಗಿ ಕತ್ತು ಹಿಸುಕಿದರು.
ನನ್ನಲ್ಲಿನ ಹಿಂದಿನ ದ್ವೇಷಾಗ್ನಿ ಇನ್ನು ಪ್ರಖರವಾಯಿತು ಆದರೆ ಏನು ಮಾಡಲು ನಾ ನಿಶಕ್ತನಾಗಿದ್ದೆ, ಎಲ್ಲದಕ್ಕೂ ನಾವು ಮಾಡಿದ ತಪ್ಪು ನಿರ್ಧಾರವೇ ಕಾರಣವಾಗಿತ್ತು. ಒಳ ಇಟ್ಟ ಬಲಗಾಲನ್ನು ಹೊಸ್ತಿಲಿನಿಂದ ಹೊರ ತೆಗೆದೆ, ಹಾಗೆ ಬಗ್ಗಿ ದೊಡ್ಡಪ್ಪ ಎಂಬ ಹೊಸ ಸಂಭಂದಿಕನ ಕಾಲು ಹಿಡಿದು "ತಪ್ಪಾಯ್ತು ದೊಡ್ಡಪ್ಪ, ನಮ್ಮನ್ನು ಕ್ಷಮಿಸಿ ಬಿಡಿ, ಅವಳನ್ನು ಬಿಟ್ಟು ಬಿಡಿ, ನಾವಿಬ್ಬರು ನಿಮ್ಮನೆಲ್ಲ ಬಿಟ್ಟು ದೂರ ಹೋಗುತ್ತೇವೆ, ಅವಳನ್ನು ಅಗಲಿ ನಾನಿರಲಾರೆ, ಬಿಟ್ಟು ಬಿಡಿ ಇನ್ನೆಂದಿಗೂ ನಾವು ನಿಮ್ಮ ಸಂಭಂದವನ್ನು ಅರಸಿ ಬರುವುದಿಲ್ಲ, ಬಿಟ್ಟು ಬಿಡಿ" ಎನ್ನುತ್ತಾ ಅತ್ತು ಬಿಟ್ಟೆ.
ವಸುಂದರನ ಚೀರಾಟವೂ ಕಮ್ಮಿ ಆಯಿತು , ಕೈ ಸಡಿಲ ಗೊಂಡಿತು. ಒಳಗಿನ ತಮ್ಮ ತಂಗಿಯರೆಂಬ ೮ ಪ್ರೇಕ್ಷಕರು ಮೌನಿಯಾಗಿಯೇ ಕಣ್ಣ ಮುಂದೆ ನಡೆಯುತ್ತಿರುವ ವಿಚಿತ್ರ ನಾಟಕದ ಪ್ರೇಕ್ಷಕರಾದರು.ಭಾರವಾದ ಮನಸ್ಸಿನಿಂದ ಕಂಗಿನ ಗೇಟ್ ಮುಚ್ಚಿದೆ, ಇನ್ನೊಮ್ಮೆ ನಾ ಹುಟ್ಟಿ ಬೆಳೆದ ಮನೆಗೆ ಕೊನೆಯ ಸಲಾಂ ಹೊಡೆದು ದೂಳು ಹಿಡಿದ ದಾರಿಯಲ್ಲಿ ನಂಭಿ ಬಂದ ವಸುವಿನೊಂದಿಗೆ ಹೆಜ್ಜೆ ಇಡಲು ಕಾಲಕೆಳಗೆ ನೆರಳು ಕೂಡ ನನ್ನ ಜೊತೆ ಗಿರಲಿಲ್ಲ.


೧೮

ನನ್ನ ಎದೆಯಲ್ಲಿ ವಸುಂದರ ಅಂದು ಹಚ್ಚಿದ ಪ್ರಶಾಂತ ಪ್ರೇಮದ ಹಣತೆ ಈಗ ವಿರಾಟ ರೂಪ ತಾಳಿತ್ತು , ನಮ್ಮಿಬ್ಬರ ಜೀವನದಲ್ಲಿ ದೊಡ್ಡದೊಂದು ಸುಂಟರಗಾಳಿಯನ್ನೇ ಎಬ್ಬಿಸಿತ್ತು. ಇಬ್ಬರ ಮನೆಯವರಿಂದಲೂ ಬಹಿಷ್ಕಾರ ಹಾಕಿಸಿ ಕೊಂಡ ಈ ಹದಿಹರೆಯದ ಜೋಡಿಹಕ್ಕಿಗೆ ಸೂರು ಇಲ್ಲದಾಯಿತು.ಇಬ್ಬರು ಸಂಧರ್ಭ ಕೊಟ್ಟ ಶಿಕ್ಷೆಗೆ ಶರಣಾಗಬೇಕಾಯಿತು. ಮನೆಯವರು ನನ್ನನ್ನು ದೂರ ಮಾಡಿದರು ಆದರೂ ಅವರಿಗೆ ನನ್ನ ಆಶ್ರಯದ ಅಗತ್ಯವಿತ್ತು ಅಂದುಕೊಂಡು ಪುನಃ ಬೆಂಗಳೂರಿಗೆ ಹೋಗುವುದು ಬೇಡ ಮಂಗಳೂರಿನಲ್ಲಿಯೇ ಕೆಲಸ ಹುಡುಕುವುದು ಎಂದು ನಿಶ್ಚಯಿಸಿ ಕೊಂಡೆ. ತಂದೆಯವರ ಕೊನೆಯ ಕಾರ್ಯ ನನ್ನ ಕೈಯಲ್ಲಿ ಮಾಡಲಾಗಲಿಲ್ಲವಲ್ಲ ಎಂಬ ಕೊರಗಿನಿಂದಲೇ ಸುಡು ಬಿಸಿಲಿನಲ್ಲಿ ನಾವಿಬ್ಬರು ಬರುತಿದ್ದೆವು ಅದೇ ವೇಳೆಗೆ ಅದೇ ಮೂರು ಮಾರ್ಗದಲ್ಲಿ ಯಶೋದಮ್ಮ ಎದುರಾದರು, ನಮ್ಮ ಹತಾಶ ಮುಖ ಛಾಯೆಯನ್ನು ನೋಡಿ ಅವರು ನಮ್ಮೊಂದಿಗೆ ನಡೆದಿರಬಹುದಾದ ವಿಷಯಗಳನ್ನು ಮನಗೊಂಡು ನನ್ನ ಮತ್ತು ವಸುವನ್ನು ಸಲ್ಪ ದಿನದ ಮಟ್ಟಿಗೆ ಅವರ ಮನೆಯಲ್ಲಿ ಇರುವಂತೆ ಸೂಚಿಸಿದರು. ಅವರ ಆ ಮಾತುಗಳು ನಿಜಕ್ಕೂ ನಮಗೆ ನೂರು ಆನೆಯ ಬಲ ನೀಡಿದಂತಾಯಿತು.

ಯಶೋದಮ್ಮನ ಮನೆಯಲ್ಲಿ ಅಂದು ಮಿಕ್ಕಿದ ಅನ್ನ ಸಾರಿನಿಂದಲೇ ಹಸಿವಿನ ದಾಹವನ್ನು ಸಣ್ಣ ಮಟ್ಟಿಗೆ ತೀರಿಸಿಕೊಂಡೆವು.ನಾನು ಅವರಲ್ಲಿ ಯಾವುದಾದರು ಸಣ್ಣ ಪುಟ್ಟ ಕೆಲಸ ಪಕ್ಕದೂರಿನಲ್ಲಿ ಇಲ್ಲ ಮಂಗಳೂರಿನಲ್ಲಿ ಹುಡುಕುತ್ತೇನೆ, ಮನೆಯವರ ಕಣ್ಣಿಗೆ ಬೀಳದೆ ಅವರ ಎಲ್ಲಾ ಜವಾಬ್ಧಾರಿ ನಾ ತೆಗೆದು ಕೊಳ್ಳಬೇಕು, ಕೆಲಸಕ್ಕೆ ನಿಮ್ಮ ಸಹಾಯ ಬೇಕು ಎಂದು ವಿನಂತಿಸಿ ಕೊಂಡೆ. ಅವರು ಅದಕ್ಕೆ ಸಮ್ಮತಿ ಇಟ್ಟರು.

ಯಶೋದಮ್ಮ ನವರು ತನ್ನ ಮಗನ ಹಳೆಯ ಕೆಲವು ಶರ್ಟ್ ಮತ್ತು ಮಗಳ ಕೆಲ ಹಳೆ ಬಟ್ಟೆಗಳನ್ನು ನಮ್ಮಿಬ್ಬರಿಗೆ ಕೊಟ್ಟರು. ಅಂತು ಇಂತು ೧ ವಾರದಿಂದ ತೊಟ್ಟ ಬಟ್ಟೆಯಿಂದ ಮುಕ್ತಿ ಸಿಕ್ಕಿದಂತಾಯಿತು.ತಮ್ಮ ತೋಟದಲ್ಲಿರುವ ಪಂಪ್ ರೂಂ ನಲ್ಲಿ ನಮ್ಮಿಬ್ಬರ ವಾಸ್ತವ್ಯಕ್ಕೆ ಅನುವು ಮಾಡಿಕೊಟ್ಟರು.ನಾನು ಹಾರೆ ಗುದ್ದಲಿ ಹಿಡಿದು ಅವರ ಹೊಲದ ಕೆಲಸದಲ್ಲಿ ನಿರತನಾಗಿದ್ದರೆ ವಸುಂಧರನಿಗೆ ಮನೆಯ ಯಾವುದೇ ಕೆಲಸ ಗೊತ್ತಿರದಿದ್ದರೂ ಕೂತು ಯಶೋದಮ್ಮ ಕೊಟ್ಟ ಬಿಟ್ಟಿ ಅನ್ನ ತಿನ್ನಲು ಸ್ವಾಭಿಮಾನ ಅಡ್ಡ ಬಂದು ಮನೆಯ ಕಸ ಮುಸುರೆ ಕೆಲಸವನ್ನು ನೆಚ್ಚಿ ಕೊಂಡು ಮಾಡಲು ತೊಡಗಿದಳು. ಬೆಳಗ್ಗೆ ಮತ್ತು ಸಂಜೆ ಹೊಲದ ತೆಂಗಿನ ತೋಟಕ್ಕೆ ನೀರು ಬಿಡುವುದು, ಬಿದ್ದ ಅಡಿಕೆ ಸಂಗ್ರಹಿಸುವುದು ನನ್ನ ಮತ್ತು ವಸುಂದರನ ದಿನಚರಿ ಯಲ್ಲಿ ಸೇರಿ ಹೋಯಿತು.

ಒಂದು ವಾರದಲ್ಲೇ ವಸುಂದರ ಇಂಥ ಸಣ್ಣ ಪುಟ್ಟ ಕೆಲಸ ಕಲಿತಳು,ಹೊಲದಲ್ಲಿನ ಕಳೆ ಎಲ್ಲಾ ಚೊಕ್ಕವಾದವು, ಬೇಲಿ ಇನ್ನು ಗಟ್ಟಿಯಾದವು. ಇನ್ನು ನನಗೆ ಆ ಹೊಲದಲ್ಲಿ ದೈನಂದಿನ ಕೆಲಸ ವಿರಲಿಲ್ಲ.  ಮಾರನೆ ದಿನ ಬೆಳಗ್ಗಿನ ಕೆಲಸ ಮುಗಿಸಿ ಮಂಗಳೂರಿಗೆ ಹೋಗಿ ನನಗೆ ತಕ್ಕ ಮಟ್ಟಿನ ಕೆಲಸದ ಹುಡುಗಾಟ ನಡೆಸುವ ಎಂದು ಹೊರಟೆ.ಸಣ್ಣ ಪುಟ್ಟ ಹೋಟೆಲ್,ಗರಾಜ್ ಎಲ್ಲಾ ಹುಡುಕಾಟ ನಡೆಸಿದೆ. ಸಂಜೆ ಯ ಹೊತ್ತಿಗೆ ಒಂದು ಹೋಟೆಲಿನಲ್ಲಿ ೪೫೦ ತಿಂಗಳ ಸಂಬಳಕ್ಕೆ ಒಪ್ಪಿಕ್ಕೊಂಡೆ.

ಈ ಸುದ್ದಿಯನ್ನು ನಾನು ವಸುಂದರನಲ್ಲಿ ಸಂಜೆ ಹೇಳಿಕೊಂಡೆ. ಅವಳು "ಆ ಕೆಲಸದ ಬದಲು ಬೆಂಗಳೂರಿನಲ್ಲಿ ಗಿಟ್ಟಿಸಿದ ಕೆಲಸವೇ ಒಳ್ಳೇದು ತಿಂಗಳಿಗೆ ೨೫೦ ರುಪಾಯಿ ಹೆಚ್ಚಿನದಾಗಿ ಸಂಪಾದಿಸಬಹುದು,ಮಂಗಳೂರಿನ ಕೆಲಸ ಬೇಡ ಬದಲಿಗೆ ಬೆಂಗಳೂರಿನಲ್ಲಿ ಹೆಚ್ಚಿನ ಸಂಬಳಕ್ಕೆ ಸೇರಿ ಕೊಳ್ಳಿ" ಅಂದಳು.
ನಾನು ಇವಳಲ್ಲಿ ನಗರದ ವ್ಯಾಮೋಹ ತುಂಬಿದೆ ಅಂದುಕ್ಕೊಂಡೆ ಆದರೆ ಅವಳು ಮುಂದುವರಿಸಿದಳು "ನೀವು ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿ ಕೊಳ್ಳಿ, ನಾನು ಇಲ್ಲೇ ಯಶೋದಮ್ಮ ನೊಂದಿಗೆ ನಿಮ್ಮ ಮನೆಯವರ ಕಾಳಜಿ ವಹಿಸಿ ಕೊಳ್ಳುತ್ತೇನೆ, ನೀವು ಅಲ್ಲಿ ಆರಾಮಾಗಿರಿ."ಅಂದಳು.

ನನಗೆ ಅವಳ ಮೇಲೆ ಈಗ ಅಭಿಮಾನವು ಇಮ್ಮಡಿ ಯಾಯಿತು, ತನ್ನ ಬಗ್ಗೆ ಧ್ವೇಶದ ಮಾತಾಡಿದ ನನ್ನ ಕುಟುಂಬದವರ ಮೇಲೆ ಇವಳು ಕಾಣಿಸುತಿದ್ದ ಪ್ರೀತಿ ಕಂಡು ನನಗೆ ಮನ ಉಕ್ಕಿ ಬಂತು, ಇಲ್ಲಿದ್ದರೆ ಬಾರಿ ಬಾರಿಗೂ ಜನರ ಚುಚ್ಚುಮಾತಿಗೆ ಗುರಿ ಆಗ ಬೇಕಾಗುತ್ತದೆ, ಆದರೆ ಬೆಂಗಳೂರಿಗೆ ಹೋದರೆ ಇವೆಲ್ಲದರಿಂದ ಮುಕ್ತಿ ಸಿಗುತ್ತದೆ, ವಸುಂದರನನ್ನು ಇಲ್ಲಿ ನನ್ನ ಮನೆಯವರು ಬಿಟ್ಟರೆ ಬೇರೆ ಯಾರು ಗುರುತಿಸಲಾರರು, ಯಶೋದಮ್ಮನಿಗೂ ರಾಯರಿಗೂ ಇವಳು ಈಗ ಮಗಳಿನಷ್ಟೇ ಆತ್ಮೀಯಳಾಗಿದ್ದಳು. ಇವಳ ರಕ್ಷಣೆ ಅವರು ಮಾಡುವಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ.
ನಾನು ವಸುಂದರನಲ್ಲಿ "ಯಶೋದಮ್ಮನಲ್ಲಿ ಕೇಳಿ ನೋಡುವ ಅವರೆನೆನ್ನುತ್ತಾರೆ ಅದರ ಮೇಲೆ ನಾವು ನಿಶ್ಚಯ ತೆಗೆದು ಕೊಳ್ಳುವ" ಅಂದೆ.
ತಂದಿದ್ದ ಸಿಹಿ ತಿಂಡಿಯ ಪೊಟ್ಟಣದೊಂದಿಗೆ ಇಬ್ಬರು ಮನೆ ಪ್ರವೇಶಿಸಿದೆವು, ಅವರಲ್ಲಿ ಈ ಬಗ್ಗೆ ಅವರ ಅಭಿಪ್ರಾಯ ಕೇಳಿದೆವು, ಅದಕ್ಕೆ ಅವರು "ನೀನು ಬೆಂಗಳೂರಿಗೆ ಹೋಗಪ್ಪಾ, ಇಲ್ಲಿ ಇವಳ ಆರೈಕೆ ನಾನು ಮಾಡುತ್ತೇನೆ, ಸಲ್ಪ ಸಮಯದ ಬಳಿಕ ಇವಳನ್ನು ಇಲ್ಲಿಂದ ಕರಕ್ಕೊಂಡು ಹೋಗಬಹುದು ಸದ್ಯಕ್ಕೆ ನೀನೊಬ್ಬನೇ ಹೋಗು."ಅಂದರು.
ನಾನು "ಇವಳಿಂದ ನಿಮಗೆ ಊರಿನವರ ಮಾತು ಕೇಳಬೇಕಾಗಿ ಬಂದೀತು"ಅಂದೆ.
ಅದಕ್ಕೆ ಅವರು "ಇವಳನ್ನು ಯಾರು ಗುರುತಿಸಲಾರರು ಅಂದೆಯಲ್ಲಾ ..ನಾಳೆ ಇಂದ ಇವಳು ನನ್ನ ತಂಗಿ ಮಗಳಾಗಿ ನನ್ನೊಂದಿಗೆ ಇರುತ್ತಾಳೆ.ಯಾರು ಕೇಳಿದರು ನನ್ನ ತಂಗಿ ಮಗಳೆನ್ನುತ್ತೇನೆ, ನೀನು ನಿಶ್ಚಿಂತೆಯಾಗಿ ಇರು." ಅಂದರು.

ಯಶೋದಮ್ಮ ನಮಗೆ ಮತ್ತು ನಮ್ಮ ಪ್ರೀತಿಗೆ ಸಿಕ್ಕ ದೇವರಾದರು, ನಿಶ್ಚಿಂತೆಯಾಗಿ ವಸುಂದರನೊಡನೆ ಆ ಪುಂಪ್ ರೂಂ ನಲ್ಲಿ ಕೊನೆರಾತ್ರಿ ಕಳೆದೆನು.ಬೆಳಗ್ಗೆ ಎದ್ದು ಹೊಲದಲ್ಲಿನ ಕೊನೆ ದಿನದ ಕೆಲಸ,ಎಲ್ಲಾ ಮುಗಿಸಿಕೊಂಡೆ. ಯಶೋದಮ್ಮ ತಮ್ಮ ಮಗನ ೫-೬ ಜೊತೆ ಹಳೆಯ ಬಟ್ಟೆ, ೨ ಜೊತೆ ಒಳ್ಳೆ ಬಟ್ಟೆಗಳನ್ನು ಒಂದು ಬಾಗ್ ನಲ್ಲಿ ಕಟ್ಟಿ ಕೊಟ್ಟರು.ಹಬ್ಬದ ಅಡುಗೆಯನ್ನು ಮಾಡಿದ್ದರು. ಮದುವೆಯ ಊಟ ೨ ವಾರ ತಡವಾಗಿ ನವವಿವಾಹಿತ ಜೋಡಿ ಸವೆದೆವು. ರಾಯರು ಕೇಸ್ ನ ಸಲುವಾಗಿ ಉಡುಪಿ ಕೋರ್ಟ್ ಗೆ ಹೋಗಿದ್ದರು, ಸಂಜೆ ಆಗುತಿದ್ದಂತೆ ನಾನು ಯಶೋದಮ್ಮ ನ ಆಶೀರ್ವಾದ ಪಡೆದು,ವಸುಂದರನ ಹಣೆ ಮೇಲೊಂದು ಮುತ್ತಿಟ್ಟು  ಹೊರಟೆ. ಅವಳೂ ನನ್ನೊಂದಿಗೆ ಆ ಓಣಿ ವರೆಗೆ ಬಂದಳು. ಒಮ್ಮೆ ಅವಳನ್ನು ತಬ್ಬಿ,

 "ಬಹುಬೇಗನೆ ಬಂದು ನಿನ್ನನ್ನು ಕರಕ್ಕೊಂಡು ಹೋಗುತ್ತೇನೆ, ನಿಶ್ಚಿಂತೆಯಾಗಿ ಯಶೋದಮ್ಮನವರೊಂದಿಗೆ ಇಲ್ಲೇ ಇರು,ಬೆಂಗಳೂರು ತಲುಪಿದೊಡನೆ ಅಲ್ಲಿಯ ವಿಳಾಸ ಬರೆದು ಕಳುಹಿಸುವೆ, ಕಾಗದ ಬರೆಯುತ್ತಲಿರು, ನಾನು ಪ್ರತಿಯಾಗಿ ಉತ್ತರಿಸುವೆ, ನನ್ನನ್ನು ನೋಡ ಬೇಕೆಂದಾಗ ಕಣ್ಣು ಮುಚ್ಚಿ ನಿನ್ನ ಕಣ್ಣಲ್ಲಿ ಅಡಗಿರುವ ನನ್ನಚ್ಚನ್ನು ನೋಡು, ಉಸಿರಲ್ಲಿ ಉಸಿರಾಗಿ ಹರಿಯುವ ನನ್ನ ಶ್ವಾಸವನ್ನು ಆಸ್ವಾದಿಸು, ನಾನು ನಿನ್ನಿಂದ ಬೌತಿಕ ವಾಗಿ ದೂರ ಇರುವೆನು ವಿನಃ ಮಾನಸಿಕವಾಗಿ ನಿನ್ನೊಂದಿಗೆ ಇರುವೆ , ಧೈರ್ಯವಾಗಿರು"ಅಂದೆ.

ಅವಳೂ ಮೌನ ವಾಗಿಯೇ ಇದ್ದಳು , ಕಣ್ಣ ಹನಿಗಳು ಆಗಲೇ ಮಾಲೆ ಪೋಣಿಸಲು ಆರಂಭಿಸಿದ್ದವು.ಅವಳನ್ನು ನೋಡುತ್ತಲೇ ನನ್ನ ಮನ ಕಣ್ಣು ಎರಡೂ ತುಂಬಿ ಬಂತು. ಅವಳನ್ನು ಇನ್ನೊಮ್ಮೆ ತಬ್ಬಿ ಹಣೆಗೆ ಮುತ್ತಿಟ್ಟು "ಬೇಗನೆ ಬರುವೆ,ಕತ್ತಲಾಗುತ್ತಿದೆ ಮನೆ ಸೇರು, ಬಾಯ್ " ಎಂದು ಮುಂದಿನ ರೋಡ್ ಹಿಡಕ್ಕೊಂಡೆ , ಅವಳಿನ್ನು ಅದೇ ಓಣಿಯಲ್ಲಿ ನಿಂತು ಕೈ ಆಡಿಸುತಿದ್ದಳು. ಕುತ್ತಿಗೆಯಲ್ಲಿನ ಹರಸಿನದಾರ ನನ್ನನ್ನೇ ನೋಡುತ್ತಿತ್ತು, ಒಲ್ಲದ ಮನಸ್ಸಿನಿಂದ ಬಸ್ ಸ್ಟಾಪ್ ಕಡೆಗೆ ಹೆಜ್ಜೆ ಇಟ್ಟೆ.

No comments:

Post a Comment