Sunday, August 7, 2011

ಕಿಚ್ಚು :: ಭಾಗ - ೩


ಹಿಂದಿನ ಕಂತು

ಮೊದಲ ಕಂತುಹಿಂದಿನ ದಿನದ ಖುಷಿಯನ್ನು ಹೊತ್ತು ಕೊಂಡು ಅಂದು ಕಾಲೇಜ್ ಕಡೆಗೆ ಹೋಗಿದ್ದೆ, ೧೦ ಗಂಟೆಗೆ ಕಾಲೇಜ್ ಶುರುವಾಗುವುದಾದರೂ ನಾವಿಬ್ಬರು ೮ :೩೦ ಕ್ಕೆ ಕಾಲೇಜ್ ನ ಒಳಗಿರುತಿದ್ದೆವು. ಇಂದು ಅವಳನ್ನು ಬಿಡಲು ಯಾವಾಗಿನಂತೆ ಅವಳ ಡ್ರೈವರ್ ಬಂದಿರಲಿಲ್ಲ ಬದಲಾಗಿ ಅವಳ ತಂದೆಯವರು ಬಂದಿದ್ದರು. ನನ್ನ ಚೆಲುವೆ ಇಂದೇಕೋ ತುಂಬಾ ಭಯದಲ್ಲಿದಂತೆ ಕಾಣುತಿದ್ದಳು, ಕಾಯುತ್ತ ನಾನು ಗೇಟ್ ಪಕ್ಕ ನಿಂತಿದ್ದೆ. ಅವಳು ಮತ್ತು ಅವಳ ತಂದೆಯವರು ಕಾರನ್ನು ಪಕ್ಕದಲ್ಲಿ ನಿಲ್ಲಿಸಿ, ನಾನಿದ್ದ ಮರದ ಕೆಳಗೆ ಬಂದರು. ಹಿಡಿ ಕಾಲೇಜ್ ಕಾಂಪೌಂಡ್ ನೊಳಗೆ ನಾವು ಮೂವರು ಮಾತ್ರ ಇದ್ದಿದ್ದು. ನನ್ನ ಒಳ ಮನಸ್ಸು ನಮ್ಮ ಪ್ರೇಮಕ್ಕೆ ಯಾವುದೋ ಆಪತ್ತು ಕಾದಿದೆ ಎಂಬ ಶಕುನ ನುಡಿಯುತಿತ್ತು.ನಿನ್ನೆ ನಡೆದ ವಿಚಾರ ಇವರಿಗೆ ಗೊತ್ತಗಿರಬಹುದು ಅದಕ್ಕಾಗಿಯೇ ಮಗಳೊಂದಿಗೆ ಇಂದು ಕಾಲೇಜ್ ಬಂದಿರಬಹುದು ಅಂದು ಕೊಂಡೆ.

ರಾಯರು ನನ್ನ ಬಳಿ ಬಂದು "ನಿನ್ನೆ ಇವಳು ಹೇಳಿದ ವಿಚಾರ ನಿಜವೇ ...?"ಎಂದು ಕೇಳಿದರು.
ನಾನು ಏನು ಗೊತ್ತಿರದವನಂತೆ "ಯಾವ ವಿಚಾರ ...?" ಅಂದೆ
ಅವರು ಮುಂದುವರಿಸಿದರು "ನೀವು ಒಬ್ಬೊರನ್ನೊಬ್ಬರು ಪ್ರಿತಿಸುತ್ತಿದ್ದಿರಂತೆ, ಒಬ್ಬರನ್ನೊಬ್ಬರು ಮದುವೆ ಆಗ ಬೇಕಿದ್ದಿರಂತೆ, ನಿಜವೇ ...?"
ನಾನು ಮೌನವಾಗಿದ್ದೆ, ಅವರು "ಹೇಳು , ಯಾವ ಯೋಗ್ಯತೆ ಮೇಲೆ ಈಗ ಆ ಎಲ್ಲ ಕನಸು ಕಾಣುತ್ತಿದ್ದಿಯಾ ..?"
ಅವರ ಮಾತಿನಲ್ಲಿ ಕೋಪದ ಜ್ವಾಲೆ ಉರಿಯುತ್ತಲೇ ಇತ್ತು, ಭಯದಲ್ಲೇ ನಾನೂ ಅವಳು ಸುಮ್ಮನ್ನಿದ್ದೆವು, ಅವರು ಮುಂದುವರಿಸಿದರು "ನಿನ್ನೆ ಯಾವುದೊ ದೊಡ್ಡ ಸಾಧನೆ ಮಾಡಿದವರಂತೆ ನನ್ನ ಮಗಳು ಈ ವಿಚಾರ ಹೇಳಿದಳು, ನಿನ್ನ ಒಬ್ಬನಿಗಲ್ಲ ಇವಳಿಗೂ ಯಾವ ಯೋಗ್ಯತೆ ಇದೆ ಈಗ ಭವಿಷ್ಯದ ದಿನಗಳ ಕನಸ ಕಾಣಲು ...? ಇನ್ನು  ಆ ಬಗ್ಗೆ ಆಲೋಚನೆ ಮಾಡಲು ತುಂಬಾ ಸಮಯವಿದೆ, ಈಗ ಓದುವ ಪ್ರಾಯ ಓದಿನಲ್ಲಿ ಗಮನವಿರಲಿ, ಅದು ಬಿಟ್ಟು ಸಿನೆಮಾ ನೋಡಿ ಆ ಜೀವನಕ್ಕೆ ಮಾರು ಹೋದರೆ, ಭವಿಷ್ಯದ ದಿನಗಳು ತುಂಬಾನೆ ನಾಚಿಗೆ ಹುಟ್ಟಿಸುವನ್ತಿರುತ್ತದೆ."

ನಾನೂ ಇನ್ನು ಮೌನವಾಗಿದ್ದೆ ಅವಳು ಮೌನ ವಾಗಿರಲಿಲ್ಲ "ಅಪ್ಪಾ, ನಾನೂ ಸತ್ಯ ಹೇಳಿ ಮಾಡಿದ ತಪ್ಪೇನಾದರೂ ಏನು ?ನಿಮ್ಮ ಕಣ್ಣು ತಪ್ಪಿಸಿ ಇವರೊಂದಿಗೆ ಸರಸವಾಡಲು ಮನಸಿರಲಿಲ್ಲ, ನಾಳೆ ಯಾರೋ ಒಬ್ಬ ಹೊರಗಿನವ ಈ ವಾರ್ತೆ ನಿಮ್ಮ ಕಿವಿಗೆ ಹಾಕಿದಾಗ ನಿಮ್ಮನ್ನು ಎದುರಿಸುವ ಧೈರ್ಯವೂ ನನ್ನಲ್ಲಿಲ್ಲ, ಇದೇ ಸರಿ ಎಂದು ನಿಮ್ಮಲ್ಲಿ ಹೇಳಿದೆ, ಆದರೆ ನೀವು ಇಂದು ನನ್ನ ಕನಸನ್ನೇ ಚಿವುಟಿ ಬಿಟ್ಟಿರಿ, ಈ ವರೆಗೆ ನಾನೂ ಕೇಳದಿದ್ದರೂ ಎಲ್ಲ ನನ್ನ ಎಲ್ಲಾ ಬೇಡಿಕೆಗಳನ್ನು ತೀರಿಸಿದ್ದಿರಿ, ಆದರೆ ಇಂದು ನಾನೂ ಕೇಳುವ ಮೊದಲ ಬೇಡಿಕೆಗೆ ಇಲ್ಲ ಅಂತ ಯಾಕೆ ಹೇಳುತ್ತಿದ್ದೀರಾ, ನನಗೆ ನಿಮ್ಮ ಧನ ಸಂಪತ್ತು ಯಾವುದೂ ಬೇಡ ನನಗೆ ಬೇಕಾಗಿರುವುದು ಈ ಬಡ ಹೃದಯ, ಬೇಡ ಅನ್ನಬೇಡಿ ಅಪ್ಪಾ... " ಅನ್ನುತ್ತ ಜೋರನೆ ಅಳಲಾರಂಬಿಸಿದಳು.

ನನಗೆ  ಏನು ಹೇಳಬೇಕು ತೋಚಲಿಲ್ಲ, ರಾಯರು ಅವರ ಮಾತನ್ನು ಮುಂದುವರಿಸಿದರು "ಪ್ರೀತಿಸುವುದು ತಪ್ಪಲ್ಲಾ ಮಗಳೇ, ಆದರೆ ಪ್ರೀತಿಯೇ ಸರ್ವಸ್ವ ಅನ್ನುವುದು ತಪ್ಪು, ಪ್ರೀತಿಯಾಗಿ ನಿಮ್ಮ ಭವಿಷ್ಯ ಬಲಿ ಕೊಡುವುದು ತಪ್ಪು, ಜೀವನದಲ್ಲಿ ಏನಾದರು ಸಾಧಿಸಿ, ಬಳಿಕ ಈ ಪ್ರೀತಿಯ ಮಾಯೆಯ ಬಲೆಗೆ ಬೀಳಿ, ಅದು ಬಿಟ್ಟು ಹರೆಯದ ಹುಚ್ಚು ಕಲ್ಪನೆಯ ಸೆಳೆತಕ್ಕೆ ಒಳಗಾಗಿ ಜೀವನದ ಸುಳಿಯಲ್ಲಿ ಸಿಲುಕ ಬೇಡಿ, ಇದು ನಿಮ್ಮನ್ನು ಇದರಲ್ಲಿ ಮುಳುಗಿಸಿ ಬಿಡುತ್ತದೆ,ಮತ್ತು ನಿಮ್ಮ ಅಸ್ತಿತ್ವವನ್ನೇ ಕಳೆದು ಕೊಳ್ಳಬೇಕಾಗುತ್ತದೆ , ಅದಕ್ಕಾಗಿಯೇ ಈ ಕಾಳಜಿ" ಅಂದರು.

ನಾನು ಮಗಳ ಭವಿಷ್ಯದಬಗ್ಗೆ ಅವರಿಗಿದ್ದ ಅಪಾರ ಕಾಳಜಿಯೂ , ನನ್ನನ್ನು ಅವಳಿಂದ ಮೆಲ್ಲನೆ ದೂರ ಮಾಡಲು ಇವರು ಹೂಡಿದ ಮಾತಿನ ಜಾಲವೋ ತಿಳಿಯದಾದೆನು. ಕಾಲೇಜ್ ನಲ್ಲಿ ಮೆಲ್ಲನೆ ಜನ ಸಂಚಾರ ಆರಂಭವಾಯಿತು, ಅವರು ನನ್ನಿಬ್ಬರಿಗೆ ಕೈತೋರಿಸುತ್ತ ಬೀಳ್ಕೊಟ್ಟರು. ನಾವಿಬ್ಬರು ದೂರವಾಗುವ ಮಾತಿರಲಿಲ್ಲ. ಒಬ್ಬರನ್ನೊಬ್ಬರು ಅಗಲಿ ಬಾಳಲಾಗದಷ್ಟು ಹತ್ತಿರವಾಗಿದ್ದೆವು.

ನಮ್ಮಲ್ಲಿನ ಸೆಳೆತ ದಿನ ಕಳೆದಂತೆ ಹೆಚ್ಚುತ್ತಾ ಹೋಯಿತು, ಹಿರಿಯರ ಬುದ್ದಿಮಾತು ನೆನಪಿಗೆ ಬಾರದೆ ಹೋಯಿತು, ಮನೆಯಿಂದ ಕಾಲೇಜ್ ಗೆ ಬರುತ್ತಿದ್ದದ್ದೇನೋ ನಿಜ ಆದರೆ ಕ್ಲಾಸಸ್ ನಲ್ಲಿರುತ್ತಿರಲಿಲ್ಲ, ಬದಲಿಗೆ ಸಿನೆಮಾ, ಪಾರ್ಕ್, ಹೋಟೆಲ್ ಹೀಗಿನ ಅಲೆದಾಟ ಹೆಚ್ಚುತ್ತಾ ಹೋಯಿತು. ಹಿಡಿ ಕಾಲೇಜ್ ನಲ್ಲಿ ನಮ್ಮ ಸುದ್ದಿ ಹಬ್ಬಿ ನಮ್ಮ ಕಾಲೇಜ್ ನ ಪ್ರಿನ್ಸಿಪಲ್ನ ಕಿವಿಗೂ ಬಿದ್ದಾಯಿತು, ಅವರು ರಾಯರ ಹತ್ತಿರ ಸಂಭಂದಿ ಬೇರೆ ಆಗಿದ್ದರು.

ಹೀಗಿರಲು ಒಂದು ದಿನ ನನ್ನ ಚೆಲುವೆ ೯ ಗಂಟೆ ಆದರೂ ಕಾಲೇಜ್ ಗೆ ಬರಲಿಲ್ಲ, ನಾನು ಇವಳಿಗೆ ಜ್ವರ, ಶೀತ ವಾಗಿರಬಹುದು ಅಂದು ಕೊಂಡೆ, ಆದರೆ ಅವಳ ಗೆಳತಿ ನನ್ನಲ್ಲಿ ಹೇಳಿದ ಮಾತು ನಿಜಕ್ಕೂ ನನ್ನನ್ನು ಬೆಚ್ಚು ಬೀಳಿಸಿತು, ನನ್ನ ಚೆಲುವೆಯ ಶಿಕ್ಷಣವನ್ನು ಹೊರಗಿನವರ ಮಾತಿಗೆ ಹೆದರಿ ರಾಯರು ಅರ್ಧ ದಲ್ಲೇ ನಿಲ್ಲಿಸಿಬಿಟ್ಟಿದ್ದರು.ಅವಳನ್ನು ನನ್ನಿಂದ ದೂರ ಮಾಡುವ ಕೆಲಸಕ್ಕೆ ಕೈ ಹಾಕಿ ಆಗಿತ್ತು.ಅವರು ನನ್ನ ದ್ವೆಶಿಸುತ್ತಿರಲಿಲ್ಲ, ಆದರೆ ನಮ್ಮ ಹುಚ್ಚು ನಿರ್ಣಯದ ಧ್ವೇಶಿ ಆಗಿದ್ದರು.

ಲೋಕದ ಜನ ಜಾತಿ, ಧನ, ರೂಪ, ಗುಣ,ಅಂತಸ್ತು ಎಂಬ ಹತ್ತು ಹಲವು ಬೇಲಿಯನ್ನು ನನ್ನ ಮತ್ತು ಅವರ ನಡುವೆ ಕಟ್ಟಿ ಹಾಕಿದ್ದರು. ರಾಯರು ತಮ್ಮ ಸರಹದ್ದು ದಾಟಿ ಹೊರಬರಲಾರದಾದರು.ಲೋಕದ ಜನರಿಗಾಗಿ ಮಗಳನ್ನು ದೂರದ ಆಂದ್ರಕ್ಕೆ ರಫ್ತು ಮಾಡಿದ್ದು ಆಯಿತು. ತಮ್ಮ ಅಂತಸ್ತಿಗೆ ತಕ್ಕ ಅಳಿಯನ ಸಂಭಂದ ಹುಡುಕಲು ಶುರು ಮಾಡಿದ್ದೂ ಆಯಿತು.ಆಂದ್ರದ ಅತ್ತೆ ಮನೆಯಲ್ಲಿ ನನ್ನ ಚೆಲುವೆ ಭಂದಿ ಆಗಿದ್ದಳು,ತಂದೆಯನ್ನು ಶತ್ರುವಂತೆ ಕಾಣಲಾರಂಭಿಸಿದ್ದಳು. ಪ್ರೀತಿಯನ್ನು ಇನ್ನು ಗೆಲ್ಲಲು ಸಾಧ್ಯವಿಲ್ಲ ಎಂಬ ನಿರ್ಣಯಕ್ಕೆ ಬಂದಿದ್ದಳು. ಇಲ್ಲಿ ನಾನು ಕಾಲೇಜ್ ನಲ್ಲಿ ಫೈಲ್ ಆಗಿ ಪೆರ್ಮನೆಂಟ್ ಕೂಲಿ ಕೆಲಸಕ್ಕೆ ತೊಡಗಿಸಿಕೊಂಡೆ.

ಹೀಗಿರಲು ಒಂದು ದಿನ ಅವಳ ಪತ್ರ ನಮ್ಮ ಮನೆ ವಿಳಾಸಕ್ಕೆ ಬಂದದ್ದು ಇನ್ನೂ ನನ್ನಲ್ಲಿ ನನ್ನ ಪ್ರೀತಿ ಜೀವಂತ ವಿದೆ ಎಂಬ ನಂಬಿಕೆ ಹುಟ್ಟಿಸಿತು.ಅದರಲ್ಲಿ ಅವಳು ಎಲ್ಲಾ ವಿಚಾರ ಪರಿ ಪರಿಯಾಗಿ ವಿವರಿಸಿದ್ದಳು, ತನ್ನ ಆತ್ಮಹತ್ಯೆಯ ವಿಫಲ ಪ್ರಯತ್ನ, ಅತ್ತೆ ಮಗನ ಬಲತ್ಕಾರದ ಪ್ರಯತ್ನ, ಸಂಭಂದ ನಿರಾಕರಿಸಿದ ೬ ಶ್ರೀಮಂತ ಹುಡುಗರ ವಿವರಣೆ   ಎಲ್ಲಾ ತುಂಬಿರುವ ೧೦ ಪುಟಗಳ ಒಂದು ಸುಂದರ ಪತ್ರ ಬರೆದಿದ್ದಳು, ಕೊನೆಯ ಪುಟದಲ್ಲಿ ತನ್ನ ಅತ್ತೆ ಮನೆಯ ವಿಳಾಸ ಬರೆದಿಟ್ಟು , ನೀನು ಇಲ್ಲಿ ಬಂದು ನನ್ನನ್ನು ಬಿಡಿಸಿ ಕೊಂಡು ಹೋಗು, ಮದುವೆ ಆಗಿ ದೂರದಲ್ಲೆಲ್ಲಾದರು ಬಾಳುವ  ಎಂಬ ನಿರ್ಣಯವನ್ನು ಬರೆದಿದ್ದಳು.

ನನ್ನ ಬರುವಿಕೆಯನ್ನು ಕಾಯುತ್ತಿದ್ದಳು ಅವಳು, ಈಗ ಅವಳನ್ನು ಪಡೆದೇ ತೀರಬೇಕು ಎಂಬ ಹಠ. ಅವರ ಮನೆಯವರ ಬಗ್ಗೆ, ಮಾತಾಡುವ ಲೋಕದ ಜನರಬಗ್ಗೆ ಧ್ವೇಶದ ಕಿಚ್ಚು ನನ್ನೆದೆಯಲ್ಲಿ ಹೊತ್ತಿ ಉರಿಯಲಾರಂಬಿಸಿತು.ಸ್ವಂತ ಸಂಪಾದನೆ ಇರುವುದರಿಂದ ಅವಳನ್ನು ಸಾಕ ಬಹುದು ಎಂಬ ಹುಚ್ಚು ಧೈರ್ಯ ನನ್ನನ್ನು ಆಂದ್ರ ಟ್ರೈನ್ ಹತ್ತಿಸಿ ಬಿಟ್ಟಿತು.

ಒಂದು ಬದಿಯಲ್ಲಿ ಅವಳು ನನಗೆ ಹತ್ತಿರವಾಗುತ್ತಾಳೆ ಎಂಬ ಭಾವ ಮೂಡುತ್ತಿದ್ದರೆ, ನನ್ನೊಳಗಿನ ಕಿಚ್ಚು ಹೊರಗಿನ ಪ್ರಪಂಚ ಕಾಣದಷ್ಟು ದ್ವೇಷದ ಹೋಗೆ ಉಗುಳುತಿತ್ತು.


ಮುಂದಿನ ಭಾಗNo comments:

Post a Comment