Wednesday, August 10, 2011

ಕಿಚ್ಚು :: ಭಾಗ ೬


೧೪ ಮಂಗಳೂರು ಬಸ್ ಹತ್ತಿಕೊಂಡೆವು, ಆದರೆ ನನಗೊಂದು ಮೂಲೆ ವಸುಂದರಳಿಗೆ ಒಂದು ಮೂಲೆಯಲ್ಲಿ ಸೀಟ್ ಸಿಕ್ಕಿತು, ನನ್ನ ಬದಿಯಲ್ಲಿ ಕುಳಿತಿದ್ದ ಆ ವ್ಯಕ್ತಿಯನ್ನು ನಾನು ಹಿಂದೆ ಕುಳಿತು ಕೊಳ್ಳುವಂತೆ ಹೇಳಿ ಹಿಂದೆ ಕುಳಿತಿದ್ದ ವಸುಂದರನ ಸೀಟ್ ಜೊತೆಗೆ ಬದಲಾಯಿಸಿ ಕೊಂಡೆ. ವಸುಂದರ ನನ್ನ ಬದಿಯಲ್ಲೇ ಬಂದು ಕುಳಿತು ಕೊಂಡಳು, ತನ್ನ ಎರಡು ಕೈಗಳನ್ನು ನನ್ನ ಬಲಗೈಯ ಸಂದಿನಿಂದ ವರಿಸಿಕೊಂಡು ತಬ್ಬಿ ತ್ಹೊಳಮೇಲೆ ತನ್ನ ಮುದ್ದಾದ ಕೆನ್ನೆಯನ್ನಿಟ್ಟು, ಹಾಗೆ ನಿದ್ದೆಗೆ ಜಾರಿದಳು.

ನನಗೆ ನಿದ್ದೆ ಹತ್ತದೆ, ನಾವು ನಮ್ಮ ಮನೆಯವರಿಗೆ ಮಾಡಿದ್ದ ತಪ್ಪು ಎಳೆ ಎಳೆ ಯಾಗಿ ಸುಳಿ ಬಿಚ್ಚುತ್ತಾ ಹೋಗುತಿತ್ತು, ಬಸ್ ಹಾಗೆ ಮಂಜಿನ ನಡುವೆ ಊರು ಊರು ಕ್ರಮಿಸುತಿತ್ತು. ಚಳಿಯು ಹೆಚ್ಚುತ್ತಾ ಹೋಯಿತು, ವಸುಂದರ ಆ ಚಳಿಯಲ್ಲಿ ಕಂಪಿಸುತಿದ್ದಳು , ಇದಕ್ಕಿದ್ದಂತೆ ಅವಳು ನಿದ್ದೆಯಿಂದ ಬೆಚ್ಚಿ ಬಿದ್ದಳು, ನನ್ನನ್ನು ಇನ್ನು ಗಟ್ಟಿಯಾಗಿ ತಬ್ಬಿ ಕೊಂಡು"ನನ್ನನ್ನು ಬಿಟ್ಟು ನೀನು ಹೋಗುವುದಿಲ್ಲವಲ್ಲ ...?" ಅಂದಳು.
 
ನಾನು "ಇಲ್ಲ ಕಣೆ, ಪುನಃ ಪುನಃ , ಯಾಕೆ ಕೇಳುತ್ತಿರುವೆ?, ಹಾಗೆ ಎಂದಿಗೂ ಆಗದು, ಕಷ್ಟವೋ ಸುಖವೋ ನಾನಿನ್ನೊಂದಿಗಿರುವೆ." ಅಂದೆ.
 
ಅವಳು "ಇಲ್ಲ ನೀನು ನನ್ನನ್ನು ಬಿಟ್ಟು ಹೋಗುತ್ತಿಯ,... ನನಗೊತ್ತು..." ಅಂದಳು.
 
ನಾನು "ಏನು ನಿನ್ನ ಹುಚ್ಚಾಟಿಕೆ, ಯಾಕಾಗಿ ಈ ರೀತಿ ಆಡುತ್ತಿಯಾ ?"ಅಂದೆ.
 
ಅವಳು "ನಿಮ್ಮ ಮೇಲೆ ನನಗೆ ನಂಬಿಕೆ ಇದೆ ಆದರೆ,ಮುಂದೆ ಬರುವ ಸಂದರ್ಭಗಳನ್ನೂ ನೆನೆದಾಗ ನನಗೆ ಹಾಗೆ ಅನಿಸುತ್ತದೆ." ಅಂದಳು .
 
ನಾನು "ಏನಾಯ್ತು ವಸು, ಯಾವುದಾದರು ಕೆಟ್ಟ ಕನಸು ಬಿತ್ತೆ..?"ಹೀಗೆ ಹೇಳುತಿದ್ದಂತೆ ಅವಳು ಇನ್ನೂ ಗಟ್ಟಿಯಾಗಿ ನನ್ನ ತಬ್ಬಿದಳು, ತಿಳಿದೋ ತಿಳಿಯದೋ ಅವಳ ಕಣ್ಣೀರಿನ ಕಟ್ಟೆ ಒಡೆದು ಹೋಯಿತು, ನೀರಿನ ಝರಿ ಮೆಲ್ಲನೆ ನನ್ನ ಬಲ ತೋಳಿನಲ್ಲಿ ಹರಿಯಲಾರಂಬಿಸಿತು.ಅವಳು ಬಿಕ್ಕುತ್ತಲೇ ಮುಂದುವರಿಸಿದಳು "ಹುಂ , ನೀನು ನನ್ನನ್ನು ಬಿಟ್ಟು ಹೋಗುತ್ತಿಯ, ನನ್ನನ್ನು ನನ್ನ ಮನೆಯವರು ಮೊದಲೇ ಹೊರ ಹಾಕಿದ್ದರೆ, ನಿನ್ನ ಮನೆಯವರ ದೃಷ್ಟಿಯಲ್ಲಿ ನಾನು ನಿನ್ನ ತಲೆ ಕೆಡಿಸಿದ ಮಾಯಾಂಗಿನಿ, ಯಾರಿಲ್ಲದ ಒಂಟಿ ಜೀವಿಯಾಗಿ ಜೆಗುಪ್ಸೆ ಹೊಂದಿ ಕೊನೆಗೆ ಆತ್ಮಹತ್ಯೆ ಮಾಡುವ ಕನಸು ಕಂಡೆ " ಅಂದಳು.
 
ನಾನು "ಇಲ್ಲ ಕಣೆ ನಾ ನನ್ನ ಕೊನೆಕ್ಷಣದವರೆಗೆ ನಿನ್ನೊಂದಿಗಿರುತ್ತೇನೆ, ಚಿಂತಿಸ ಬೇಡ .."ಅಂದೆ.
ಅವಳು "ನೀನು ನಿನ್ನ ಕೊನೆ ಕ್ಷಣದವರೆಗೆ ನನ್ನೊಂದಿಗಿರುವುದೇನೋ ನಿಜ ಆದರೆ ನನ್ನ ಕೊನೆವರೆಗೆ ಯಾರಿರುವರು ನನ್ನ ಜೊತೆ...?"ನನಗೆ ಏನು ಹೇಳಬೇಕೋ ತಿಳಿಯದೆ "ನಾವಿಬ್ಬರು ನೂರು ವರ್ಷ ಹೀಗೆ ಪ್ರೀತಿಯ ತೇರು ಎಳೆಯುತ್ತಾ ಇರುತ್ತೇವೆ,ಚಿಂತಿಸಬೇಡ "ಅಂದೆ.
ಅವಳ ಬಿಕ್ಕಳಿಕೆ ಇನ್ನು ಹೆಚ್ಚಾಯಿತು "ಇಲ್ಲ ನಿಮ್ಮನ್ನು ನಿಮ್ಮ ಅಮ್ಮ ಕೊಲೆ ಮಾಡಿ ಬಿಡುತ್ತಾರೆ, ನಾನು ಮತ್ತೆ ಒಬ್ಬಂಟಿ ಯಾಗುತ್ತೇನೆ."
ಅವಳ ಮನಸ್ಸು ಸರಿ ಇರಲಿಲ್ಲ, ಬರೇ ಈ ಕುರಿತು ಆಲೋಚಿಸುತ್ತಿದ್ದುದರಿಂದ ಈಗಲೂ ಅದೇ ಬಗೆಯ ಕನಸು ಬಿದ್ದಿದೆ ಅಂದು ಕೊಂಡೆ, ನಾನು ಅವಳಲ್ಲಿ "ವಸು ಹಾಗೇನು ಆಗುವುದಿಲ್ಲ ಕಣೇ, ಅಮ್ಮ ಅಪ್ಪನನ್ನು ಬೇಕಂತಲೇ ಕೊಲೆ ಮಾಡಿಲ್ಲ , ತಿಳಿಯದೆ ನಡೆದು ಹೋದ ಕೆಟ್ಟ ಘಟನೆ ಅದು, ನಮ್ಮಿಬ್ಬರ ಮೇಲೆ ನನ್ನ ಅಮ್ಮನಿಗೆ ದ್ವೇಷ ವಿರುವುದೇನೋ ನಿಜ ಆದರೆ ಕೊಲೆ ಮಾಡಿ ಬಿಡುವಷ್ಟು ಧ್ವೇಷವಿಲ್ಲ, ಇಂತಹ ಬಗೆಯ ಆಲೋಚನೆ ಬಿಟ್ಟು ಬಿಡು  ಪ್ರೀತಿಗೆ ಅಪಾರ ಶಕ್ತಿ ಇದೆ ಅದು ನಮ್ಮಿಬ್ಬರ ರಕ್ಷೆಗಿರುತ್ತದೆ , ನಿಶ್ಚಿಂತೆಯಾಗಿ ಮಲಗು" ಅಂದೆ.

ಅವಳು ತನ್ನ ತಲೆಯನ್ನು ಅಲ್ಲೇ ಚಾರಿಸಿದಳು, ಕೈ ಇನ್ನು ಗಟ್ಟಿಯಾಗಿ ನನ್ನ ಕೈಯನ್ನು ತಬ್ಬಿಕೊಂಡಿತ್ತು.ಅವಳ ಕನಸನ್ನು ಕೇಳಿದ ನಂತರ ನನಗೂ ಹೀಗೆ ನಡೆದರೂ ನಡೆಯ ಬಹುದು, ನನ್ನ ಅಮ್ಮ ನನ್ನನ್ನು ಕೊಲೆ ಮಾಡಬಹುದು, ಇಲ್ಲ ನನ್ನನ್ನು ನನ್ನ ಪಾಡಿಗೆ ಬಿಟ್ಟು ಬಿಡಬಹುದು, ಆದರೆ ಮೊದಲೇ ಶ್ರೀಮಂತರಾಗಿರುವ ರಾಯರಿಗೆ ನನ್ನ ಮತ್ತು ವಸುವನ್ನು ದೂರ ಮಾಡುವುದು ಕಷ್ಟದ ಕೆಲಸವಲ್ಲ, ಯಾರಿಗೂ ಅರಿವಾಗದಂತೆ ನನ್ನನ್ನು ಬಾಡಿಗೆ ಗೂಂಡಗಳ ಕೈಯಲ್ಲಿ ಮುಗಿಸಿ ಬಿಡಬಹುದು, ವಸುಂದರ ಮತ್ತು ನನ್ನ ನಡುವಿನ ಆ ಹರಸಿನದ ದಾರವನ್ನು ಕತ್ತರಿಸಿ ಬಿಸಾಡ ಬಹುದು,ಇಬ್ಬರ ನಡುವೆ ಈ ದಾರ ಬಿಟ್ಟು ಬೇರೆ ಯಾವುದೇ ಸಾಕ್ಷಿ ಇಲ್ಲ, ಆ ಸಾಕ್ಷಿಯನ್ನು ನಾಜೂಕಿನಿಂದ  ಅಳಿಸಿಹಾಕಿದರೆ, ಅವರಂದು ಕೊಂಡಂತೆ ಅವರ ಜಾತಿಯ ಅವರ ಅಂತಸ್ತಿಗೆ ಸರಿ ಹೊಂದುವ ಹುಡುಗನೊಂದಿಗೆ ಮದುವೆ ಮಾಡಿ ಬಿಡುವರು, ವಸುಗೂ ಮೊದಲಿಗೆ ನನ್ನನ್ನಗಲಿ ಬಾಳುವುದು ಕಷ್ಟವಾಗಬಹುದು, ಆದರೆ ನಂತರ ಹೊಸಜೀವನದ ಸುಖ ಸುಪ್ಪತ್ತಿನಲ್ಲಿ ನನ್ನ ಬಡ ಪ್ರೀತಿಯನ್ನು ಮರೆತರೂ ಮರೆಯಬಹುದು,

ಇಲ್ಲ ಹಾಗಾಗುವುದಿಲ್ಲ, ನನ್ನ ವಸು ನನ್ನ ಬಿಟ್ಟು ಹೋಗುವುದಿಲ್ಲ, ಅವಳನ್ನು ನಾನು ಬಿಟ್ಟು ಹೋಗಲಾರೆ, ಏನೇ ಬಂದರು ಎದುರಿಸುತ್ತೇನೆ, ಮೊದಲೇ ಹೊತ್ತಿ ಉರಿಯುತ್ತಿರುವ ಕಿಚ್ಚಿಗೆ ಬಲಿಯಾಗಲಾರೆ, ಬದಲಿಗೆ ಅದೇ ಕಿಚ್ಚಿನಿಂದ ಒಂದು ನಿರ್ಮಲ ಜ್ಯೋತಿಯಾಗಿ ಎಲ್ಲರಿಗೆ ಮಾರ್ಗದರ್ಶನ ನೀಡುತ್ತೇನೆ.

೧೫
 

ಬೆಳಗ್ಗೆ ಇಂದ ಬೆಂಗಳೂರು ಬೀದಿ ಸುತ್ತಿ ಸುತ್ತಿ ಬಳಲಿದ್ದ ನನಗೆ ಯಾವಾಗ ನಿದ್ದೆ ಹತ್ತಿತೋ ತಿಳಿಯಲಿಲ್ಲ, ಬಸ್ ಮಂಗಳೂರು ತಲುಪಿ ಆಗಿತ್ತು. ಇಳಿದು ಬಸ್ ಬದಲಾಯಿಸಿಕೊಂಡೆವು, ಊರಿಗೆ ಹೋಗುವ ಬಸ್ಸನಲ್ಲಿ ಹತ್ತಿ ಕುಳಿತುಕೊಂಡೆವು.ವಸುಂದರ ಪೂರ್ಣವಾಗಿ ಜರ್ಜರಿತಳಾಗಿದ್ದಳು, ಲೋಕದ ಮಾತಿಗೆ ಹೀಗೆ ಉತ್ತರಿಸಲಿ ಎಂಬ ಪ್ರಶ್ನಾರ್ತಕ ಚಿನ್ಹೆ ಅವಳ ಕಣ್ಣಲ್ಲಿ ತುಂಬಿದ್ದವು, ಯಾರನ್ನು ನೋಡುವ ಧೈರ್ಯ ಆ ಕಣ್ಣಿಗಿರಲಿಲ್ಲ, ಕೈಯಲ್ಲಿ ಉಳಿದಿದ್ದ ೧೬ ರೂಪಾಯಿಯಲ್ಲಿ ೬ ರುಪಾಯಿಯ ೨ ಟಿಕೆಟ್ ತೆಗೆದು ಕೊಂಡೆ.ಮನಸ್ಸು ಇನ್ನೂ ನಾನು ಮಾಡಿದ ತಪ್ಪನ್ನೇ ಮೆಲುಕು ಹಾಕುತಿತ್ತು. ಬಸ್ಸನಲ್ಲಿ ಇದ್ದ ಕೆಲವರು ನನ್ನ ಗುರುತಿಸಿದರು ಎಂದು ಅವರ ನೋಟದಲ್ಲಿದ್ದ ತಾತ್ಸಾರ ನೋಟದಿಂದಲೇ ಮನಗಂಡೆ. ನನ್ನ ತೊಡೆ ಮೇಲೆ ತಲೆ ಇಟ್ಟು ಮಲಗಿದ್ದ ವಸುಂದರನನ್ನು ನೇವರಿಸುತ್ತಾ, ಹೊರಗಿನ ಹಸಿರನ್ನು ನೋಡುತಿದ್ದೆ.

ಮುಂದಿನ ಸ್ಟಾಪ್ನಲ್ಲಿ ಊರಿನ ಶಾನುಭೋಗರು ಬಸ್ಸ ಹತ್ತುವುದನ್ನು ನಾನು ನೋಡಿದೆ.ಅವರು ನನಗೆ ಮೊದಲ ಗುರುವಾಗಿದ್ದರು, ಆ ಅಭಿಮಾನದಿಂದಲೇ ಅವರನ್ನು ನಾನು ಒಂದು ಮುಗುಳ್ನಗೆಯೊಂದಿಗೆ ಪ್ರೀತಿ ವ್ಯಕ್ತಪಡಿಸಲು ಮುಂದಾದೆ, ಆದರೆ ಅವರು ನನ್ನ ಸ್ವಾಗತ ಸ್ವಿಕರಿಸಲೇ ಇಲ್ಲ, ಬದಲಿಗೆ ತನ್ನ ದೃಷ್ಟಿ ಯನ್ನು ಬೇರೆಡೆಗೆ ತಿರುಗಿಸಿದರು. ಬಸ್ಸನಲ್ಲಿ ಒಂದೇ ಒಂದು ಸೀಟ್ ಇದ್ದಿದ್ದು, ಅದು ನನ್ನ ಎಡಬದಿಯ ಸೀಟ್ ,ಅಲ್ಲಿ ಕುಳಿತರೆ ನನ್ನೊಂದಿಗೆ ಮಾತಾಡಬೇಕಾಗುತ್ತದೆ ಎಂದು ಶಾನುಭೋಗರು ನಿಂತೇ ಪ್ರಯಾಣಿಸಿದರು.ಹೆತ್ತ ತಂದೆ ತಾಯಿಗಳೇ ಅವರ ಸಂಭಂದಕ್ಕೆ ತಿಲಾಂಜಲಿ ಇಟ್ಟಾಗ ಈ ಗುರುವಿನ ವರ್ತನೆಯಲ್ಲಿ ನನಗೇನು ಆಶ್ಚರ್ಯ ಕಾಣಲಿಲ್ಲ.ನಾನೂ ನನ್ನ ದೃಷ್ಟಿಯನ್ನು ಅನಂತದವರೆಗೆ ಹಬ್ಬಿರುವ ವಿಶಾಲ ಭತ್ತದ ಗದ್ದೆಯೆಡೆಗೆ ತಿರುಗಿಸಿದೆ.
 

ಹಿಂದಿನ ಸೀಟ್ ನಲ್ಲಿ ಕುಳಿತಿರುವ ಎರಡು ಹೆಂಗಸರ ಮಾತು ಮತ್ತೆ ನನ್ನನ್ನು ಈ ಬದಿಗೆ ಎಳೆಯಿತು.

"
ಯಶೋದ,ನಿಮ್ಮ ಕೆಲಸದಾಕೆ ಮೀನಾಕ್ಷಿ ಯಾಕೆ ಗಂಡನ್ನ ಕೊಂದಿದ್ದು ಅಂತ ಗೊತ್ತಾಯ್ತಾ ..? "ಅವಳ ಮಾತಿಗೆ ಪಕ್ಕದಲ್ಲಿದ್ದ ಹೆಂಗಸು "ಇಲ್ಲ ಕಣೇ ಲಕ್ಷ್ಮಿ , ಹಿಂದಿನಿಂದಲೂ ತನ್ನ ಗಂಡನ ಮೇಲೆ ಅವಳಿಗೆ ಇಲ್ಲದ ಕೋಪ ಇತ್ತು, ಕುಡಿದು ಬೀದಿ ಪಾಲಾದ ಗಂಡನ ಬಗ್ಗೆ ನನ್ನಲ್ಲಿ ಪ್ರತಿದಿನ ಚಾಡಿ ಹೇಳುತಿದ್ದಳು, ಅವಳಲ್ಲಿ ನಾನು ಮನೆಯ ವಿಚಾರ  ಮಾತಾಡಬೇಡ ಅಂದಿದ್ದೆ ಆ ಬಳಿಕ ನನ್ನಲ್ಲಿ ಗಂಡನ ಕುರಿತಾದ ಚಾಡಿಯನ್ನು ಹೇಳುವುದು ನಿಲ್ಲಿಸಿದ್ದಳು. "
 
"ಈಗಿನ ಕಾಲದಲ್ಲಿ ಯಾರನ್ನು ನಂಭುವಂತಿಲ್ಲ ಕಣೇ, ಒಳ್ಳೆದಾಯ್ತು ಕೊಲೆ ಮಾಡಿ ಜೈಲ್ ಸೇರಿದಳಲ್ಲ, ಕೊಲೆ ಮಾಡಿದ ಕೊಲೆಗಾರ್ತಿಯ ಬಗ್ಗೆ ಎಷ್ಟು ನಂಬಿಕೆ ಇತ್ತಲ್ಲ ನಿನಗೆ, ಅವಳೊಬ್ಬಳ ಜವಾಬ್ಧಾರಿ ಮೇಲೆ ನೀನು ಮನೆ ಬಿಟ್ಟು ಊರು ಸುತ್ತುತಿದ್ದಿಯಲ್ಲೇ, ನಿಮ್ಮ ಮನೆಯ ಎಷ್ಟು ಪಾತ್ರೆ ಪಡಗ ಅವಳ ಅಡುಗೆ ಕೋಣೆ ಸೇರಿದೆಯೋ ದೇವನೇ ಬಲ್ಲ ... "
ಒಂದು ತಿಂಗಳ ಹಿಂದೆ ಯಶೋದಮ್ಮನ ಮನೆಗೆ ಅಮ್ಮನನ್ನು ಕರೆಯಲು ಹೋದಾಗ ಇದೇ ಲಕ್ಷ್ಮಿ ನನ್ನ ಅಮ್ಮನನ್ನು ಹೊಗಳುತಿದ್ದರು, ಅವರ ಮನೆಗೂ ಮುಂದಿನ ತಿಂಗಳಿಂದ ಮನೆಗೆಲಸಕ್ಕೆ ಬಾ ಎಂದಿದ್ದಳು, ಅದೇ ಲಕ್ಷ್ಮಿ ಇವತ್ತು ಅಮ್ಮನ ಬಗ್ಗೆ ಈ ರೀತಿ ಮಾತಾಡುವುದು ನನಗೆ ಸರಿ ಅನಿಸಲಿಲ್ಲ.ನನ್ನ ಅಮ್ಮನನ್ನು ಕೊಲೆಗಾರ್ತಿ,ಕಳ್ಳಿ ಎಂದು ಸಂಭೋದಿಸುವಾಗ ನನ್ನ ಕೋಪ ನೆತ್ತಿಗೇರಿತು, ಎಲ್ಲದಕ್ಕೂ ನಾನೇ ಕಾರಣ ನಾಗಿದ್ದೆ ಆದಕಾರಣ ಸುಮ್ಮನಾದೆ .

ಯಶೋದಮ್ಮ ಮುಂದುವರಿಸಿದಳು "ಇಲ್ಲ ಲಕ್ಷ್ಮಿ , ಮೀನಾಕ್ಷಿ ಅಂತವಳಲ್ಲಾ, ಸಂಧರ್ಭ ಅಂತದಿತ್ತು, ಗಂಡನನ್ನು ಕೊಲೆ ಮಾಡುವ ಉದ್ದೇಶ ಅವಳಿಗಿರಲಿಲ್ಲ, ತನ್ನನ್ನು ರಕ್ಷಿಸಿಕೊಳ್ಳಲು ಹೋಗಿ ಕತ್ತಿ ಗಂಡ ನೆಡೆಗೆ  ತಿರುಗಿಸಿದಳು, ಆ ಏಟಿಗೆ ಗಂಡ ಸತ್ತಿದ್ದು, ಅವಳು ಕೊಲೆಗಾರ್ತಿನೂ ಅಲ್ಲ ಸುಳ್ಳಿ , ಕಳ್ಳಿಯೂ ಅಲ್ಲ.ಮನೆಯಲ್ಲಿ ಧವಸ ಮುಗಿದಿದ್ದರೂ ಬೇಡಿ ಪಡೆಯುವ ಬುದ್ದಿಯೂ ಅವಳಲ್ಲಿರಲಿಲ್ಲ, ತುಂಬಾ ಸ್ವಾಭಿಮಾನಿಯಾಗಿದ್ದಳು,ನಾನೇನಾದರು ಕೊಟ್ಟರೆ ಪ್ರೀತಿಯಿಂದ ತೆಗೆದು ಕೊಂಡು ಹೋಗುತಿದ್ದಳು, ಮೊದಲಿಗೆ ಕೆಲಸದ ಬಳಿಕ ಕೊಟ್ಟ ತಿಂಡಿಯನ್ನು ತಿನ್ನುತಿರಲಿಲ್ಲ, ಮನೆಯಲ್ಲಿನ ಪುಟ್ಟ ಮಕ್ಕಳಿಗೆ ಕೊಂಡು ಹೋಗುತಿದ್ದಳು, ಇದನ್ನು ಮನಗಂಡ ನಾನು ಅವಳಲ್ಲಿ ನೀನು ಇಲ್ಲಿ ತಿನ್ನು ಮಕ್ಕಳಿಗೆ ನಾನೂ ಕಟ್ಟಿ ಕೊಡ್ತೇನೆ ಅಂದಿದ್ದೆ, ಆ ಬಳಿಕ ಅವಳು ನನ್ನ ಮನೆಯಲ್ಲಿ ಎರಡು ಗುಟುಕು ತಿನ್ನಲಾರಂಬಿಸಿದ್ದು, ೯ ಮಕ್ಕಳಿಗೆ ಸ್ವಾಭಿಮಾನದಿಂದ ಸಾಕುತಿದ್ದಳು,ಪಾಪ ಈಗ ಎಲ್ಲರು ಬೀದಿಗೆ ಬಿದ್ದರು."

ಲಕ್ಷ್ಮಿ ಅವಳ ಮಾತಿಗೆ ತಲೆಯಾಡಿಸುತ್ತಾ "ಯಶೋದ, ಅವಳ ಮಗನೆ ತಾನೇ ಮಂಗಳೂರಿನ ಯಾವುದೋ ಶ್ರೀಮಂತರ ಮಗಳೊಂದಿಗೆ ಓಡಿ ಹೋಗಿದ್ದು ..? ಏನಾಯ್ತು ಅವರ ವಿಚಾರ ?"

ಯಶೋದಮ್ಮ "ಗೊತ್ತಿಲ್ಲ ಕಣೇ, ಒಮ್ಮೊಮ್ಮೆ ಆ ಹುಡುಗ ನಮ್ಮ ಮನೆಗೆ ಬರುತಿದ್ದ, ಓಡಿ ಹೋಗುವ ಪ್ರಾಯವಲ್ಲ ಅವನದ್ದು , ಸರಿ ಸುಮಾರು ೧೬ - ೧೭ ಇರಬಹುದು, ಮಂಗಳೂರಿನಲ್ಲಿ ಕಾಲೇಜ್ ಗೆ ಸೇರಿಸಿದ್ದಳು ಮೀನಾಕ್ಷಿ ಮಗನನ್ನು, ಓದಿ ಮನೆಯ ಜವಾಬ್ಧಾರಿ ತಕ್ಕೊಳಲಿ ಅಂತ, ಆದರೆ ಈಗ ಆ ಮಗ ಇವಳನ್ನು ನೆನೆಯದೆ ಶ್ರೀಮಂತ ಹುಡುಗಿಯೊಂದಿಗೆ ಓಡಿ ಹೋದ,ಅಪ್ಪ ಸತ್ತು ಹೆಣವಾದ, ಅಮ್ಮ ಕೊಲೆಗಾರ್ತಿಯಾಗಿ ಜೈಲ್ ಸೇರಿದಳು,ಅವ ಅವನದ್ದೇ ಲೋಕದಲ್ಲಿದ್ದಾನೆ, ಇವತ್ತು ಅವಳ ಗಂಡನ ೧೩ ನೇ ದಿನದ ಕಾರ್ಯ ನಡೆಯುವುದಿದೆ."
 
ಲಕ್ಷ್ಮಿ ಅವಳನ್ನು ನಡುವಲ್ಲಿ ನಿಲ್ಲಿಸಿ "ಮಗನಿಗೆ ಗೊತ್ತ , ? ಮನೆಯಲ್ಲಿ ನಡೆದ ವಿಚಾರ ?"ಯಶೋದಮ್ಮ ಮುಂದುವರಿಸಿದಳು "ಅವನಿಗೆ ಲೋಕವೆಲ್ಲಿ ಕಾಣುತ್ತೆ, ಬರಿ ಪ್ರೇಮನಶೆ ತುಂಬಿದ ಕಣ್ಣಲ್ಲಿ, ಅವನ ಬದಲಿಗೆ ಅವನ ದೊಡ್ಡಮ್ಮನ ಮಗ ಇವತ್ತು ಕಾರ್ಯಕ್ಕಾಗಿ ಬರುವ, ಮೀನಾಕ್ಷಿ ಜೈಲ್ ಸೇರಿದ ಕೆಲ ದಿನ ಬಳಿಕ  ನಾನೂ ನೋಡಲು ಹೋಗಿದ್ದೆ, ಜಾಮೀನಾದರು ಕೊಟ್ಟು ಬಿಡಿಸೋಣ ಎಂದು, ಆದರೆ ಪ್ರಭಲ ಸಾಕ್ಷಿ ಇದ್ದ ಕಾರಣ ಯಾವುದೂ ನಡೆಯಲಿಲ್ಲ, ಕೊನೆಗೆ ನಾನು ಅವಳ ಸೆಲ್ ಗೆ ಹೋಗಿ ಅವಳನ್ನು ಮಾತಾಡಿದಾಗ ನನ್ನಲ್ಲಿ ಅವಳ ಮನಸ್ಸಿನ ಮಾತು ಹೇಳಿದ್ದಳು, "


೧೬


"
ನನ್ನ ದೊಡ್ಡ ಮಗ ನಮ್ಮ ಪಾಲಿಗೆ ಸತ್ತ ಅಮ್ಮಾವ್ರೇ,ನನ್ನ ೮ ಮಕ್ಕಳು ಅನಾಥರಾದರು, ಅವನ ಹಿಂದಿನ ಧನು ಇನ್ನೂ ೧೧ ರ ಹುಡುಗಿ, ಅವಳ ಹಿಂದಿನ ವಸಂತನಿಗೆ ೧೦, ಹೀಗೆ ಸಾಲು ಸಾಲು ಮಕ್ಕಳು, ಅವರ ಚಿಂತೆಯೇ ನನಗೆ, ಯಾವತ್ತು ಯಾರಲ್ಲಿ  ಏನನ್ನೂ ಬೇಡಲಿಲ್ಲ, ಆದರೆ ಇವತ್ತು ಮೊದಲ ಬಾರಿಗೆ ನಿಮ್ಮಲ್ಲಿ ನಾನೂ ಒಂದು ಮಾತು ಬೇಡುತಿದ್ದೇನೆ ನೀವು ನಡೆಸಿಕೊಡುತ್ತೀರಿ ಅಂದು ಕೊಂಡಿದ್ದೇನೆ,ಅದಕ್ಕಾಗಿಯೇ ನಿಮ್ಮಲ್ಲಿ ಕೇಳುತ್ತಿದ್ದೇನೆ , ಇಲ್ಲ ಅನ್ನಬೇಡಿ "
 
ನಾನು"ಹೇಳಿ ಮೀನಾಕ್ಷಿ ,ನಾನು ನನ್ನ ಕೈಯಲ್ಲಿ ಸಾಧ್ಯವಿದ್ದರೆ ನಡೆಸಿಕೊಡುತ್ತೇನೆ, ನಿಮಗೆ ಈ ಸಮಯದಲ್ಲಿ ಯಾವ ಸಹಾಯ ಬೇಕೋ ಕೇಳಿ ?"ಅಂದೆ
ಮೀನಾಕ್ಷಿ "ನನ್ನ ಹಿರಿ ಮಗಳು ಧನುನ ಶಾಲೆ ಬಿಡಿಸಬೇಕು ನೀವು "
"
ಯಾಕಮ್ಮ ? ಕಲಿಯಲಿ ಮಗಳು ... ನಾನು ಅವಳ ವೆಚ್ಚ ಭರಿಸುತ್ತೇನೆ ... "
ಮೀನಾಕ್ಷಿ ಮುಂದುವರೆಸಿದಳು "ಹಾಗಲ್ಲ ಯಶೋದಮ್ಮ , ಅವಳನ್ನು ಶಾಲೆ ಬಿಡಿಸಿ ನಿಮ್ಮ ಮನೆಯಲ್ಲಿ ಕೆಲಸಕ್ಕೆ ಇಟ್ಟುಕೊಳ್ಳಿ, ಅವಳಿಗೆ ನೀವು ನನ್ನಷ್ಟು ಸಂಬಳ ಕೊಡಬೇಕಾಗಿಲ್ಲ, ಯಾಕೆಂದರೆ ಈಗ ೩ ಮಂದಿಯ ಖರ್ಚು ಕಮ್ಮಿ ಯಾಗಿದೆ ೮ ಮಕ್ಕಳಿಗೆ ಎಷ್ಟು ಸಾಕೋ ಅಷ್ಟು ನೀವು ತಿಂಡಿ ತೀರ್ಥ ಅವಳ ಸಂಬಳ ರೂಪದಲ್ಲಿ ಕೊಟ್ಟರೆ ಸಾಕು, ಮುಂದಿನ ೫-೬ ವರುಷದಲ್ಲಿ ವಸಂತನಿಗೆ ಜವಾಬ್ದಾರಿ ಬರುವುದು, ಬಳಿಕ ಅವನು ನಿಮಗೆ ಯಾವುದೇ ತೊಂದರೆ ಕೊಡಲಾರ ೫-೬ ವರ್ಷದ ಮಟ್ಟಿಗೆ ಈ ಕಾರ್ಯ ನನಗೆ ನಡೆಸಿ ಕೊಡಬೇಕು, ಇಲ್ಲ ಅನ್ನ ಬೇಡಿ , ನೀವು ಒಪ್ಪದಿದ್ದರೆ ನನ್ನ ಮಕ್ಕಳು ಅನಾಥ ಶವ ಆಗುತ್ತಾರೆ ,

ನನ್ನ ಅಕ್ಕ ಅಣ್ಣನವರಲ್ಲಿ ನಾನು ಸಹಾಯ ಬೇಡ ಬಹುದಿತ್ತು ಆದರೆ ಜೈಲು ಸೇರಿದ ತಂಗಿಯನ್ನು ಅವರು ದೂರ ಮಾಡಿದರು, ಇನ್ನೂ ವರೆಗೂ ನನ್ನವರು ಅನಿಸಿಕೊಂಡವರು ಬರಲೇ ಇಲ್ಲ, ನೀವು ರಕ್ತ ಸಂಭಂದಿ ಅಲ್ಲದಿದ್ದರೂ ಪ್ರೀತಿ ಮತ್ತು ವಿಶ್ವಾಸಕ್ಕೆ ನನ್ನ ನೋಡಲು ಬಂದಿದ್ದಿರಿ ಅದರಿಂದ ನೀವು ಈ ಕಾರ್ಯಕ್ಕೆ ಸೂಕ್ತ ಎಂದು ನಿಮ್ಮಲ್ಲಿ ಹೇಳುತ್ತಿದ್ದೇನೆ ನಡೆಸಿ ಕೊಡಿ , ಇಲ್ಲ ಅನ್ನಬೇಡಿ...   " ಅಂದು ಗೊಳ್ಳನೆ ಅತ್ತಳು.

ಅವಳ ಮಾತು ಕೇಳುತಿದ್ದಂತೆ ನಾನು "ಧನು ನಮ್ಮ ಮನೆಗೆ ಈಗ ಕೆಲಸಕ್ಕೆ ಬರಬೇಕ್ಕಂತಿಲ್ಲ, ಮಗ ವಿದೇಶಕ್ಕೆ ಹೋದ ೨ ಜನರ ಕೆಲಸ ಅಷ್ಟೇನೂ ಹೆಚ್ಚಿಲ್ಲ ನಾನೇ ಮಾಡುತ್ತೇನೆ .. ಅವಳು ಶಾಲೆಗೆ ಹೋಗಲಿ .."
ಮೀನಾಕ್ಷಿ ನನ್ನನ್ನು ನಡುವಲ್ಲಿ ತಡೆದು  "ನನ್ನ ಮಕ್ಕಳು ಬೀದಿಗೆ ಬೀಳುವರಮ್ಮಾ, ಹಾಗೆನ್ನ ಬೇಡಿ ... "ಅಂದಳು.
ನಾನು ಮುಂದುವರೆಸಿದೆ "ಧನು ಮನೆಗೆ ಬರುವುದು ಬೇಡ ಅಂದೆ ವಿನಃ ನಾನು ಅವರ ಆರೈಕೆ ಮಾಡಲ್ಲ ಅಂದಿಲ್ಲ, ಅವರನ್ನು ನಾನು ನನ್ನ ಮಕ್ಕಳಂತೆ ನೋಡಿಕ್ಕೊಳ್ಳುತ್ತೇನೆ,ಅವರ ಚಿಂತೆ ಬಿಟ್ಟು ಬಿಡಿ, ನಿಮಗೂ ಬೇಗನೆ ಶಿಕ್ಷೆ ಮುಗಿಯುವಂತೆ ಲಾಯರ್ ಆದ ನನ್ನ ಗಂಡನಲ್ಲಿ ಪ್ರಯತ್ನಿಸುವಂತೆ ಹೇಳುತ್ತೇನೆ , ನೀವು ನಿಶ್ಚಿಂತೆಯಾಗಿರಿ " ಅಂದೆ.
ಮೀನಾಕ್ಷಿಯ ಕಣ್ಣಲ್ಲಿ ಒಂದು ಆಶಾಕಿರಣ ನೋಡಿ ನಾನು ನನ್ನಲ್ಲೇ ಒಂದು ಸಾರ್ತಕಥೆ ಕಂಡೆ. ಮೀನಾಕ್ಷಿ ಮುಂದುವರಿಸಿದಳು  "ಇನ್ನೊಂದು ಸಾಹಾಯ, ನನ್ನ ವಸಂತ ಇನ್ನೂ ಸಣ್ಣವ ಅದಕ್ಕಾಗಿ ನನ್ನ ಅಕ್ಕನ ಮಗನಿಂದಲೇ ನನ್ನ ಮನೆಯವರ ಕೊನೆಯ ಕಾರ್ಯ ಮಾಡಿಸಬೇಕು,ಬೆಂಗಳೂರಿನಲ್ಲಿ ಏನೋ ಕೆಲಸ ಮಾಡುತಿದ್ದಾನೆ, ಅವನನ್ನು ಊರಿಗೆ ಬರುವಂತೆ ಹೇಳಬೇಕು, ನಾನು ಬರಲು ಹೇಳಿದ್ದೇನೆ ಎಂದು ಅವನ ಮನೆಯವರಲ್ಲಿ ಹೇಳಿದರೆ, ಅವರು ಅವನನ್ನು ಕರೆಸಿ ಕೊಳ್ಳುವರು "

ನಾನು "ಅಲ್ಲಮ್ಮ ನಿನ್ನ ಸಂಭಂದಿಕರು ನಿನ್ನನ್ನು ದೂರ ಮಾಡಿದರು ಅನ್ನುತ್ತಿಯಾ, ಅವರು ಅವನನ್ನು ನಿನಗೆ ಬೇಟಿ ಮಾಡಿಸುವರೆ ..? ಅವನ ವಿಳಾಸ ಇದ್ದರೆ ನಾನೇ ಕರೆಯುವೆ.. ಹೇಳಿ .. " ಅಂದೆ
 
ಅದಕ್ಕೆ ಪ್ರತಿಯಾಗಿ ಮೀನಾಕ್ಷಿ "ಅವನ ತಂಗಿ ಸಾವಿತ್ರಿ ಯಲ್ಲಿ ಹೇಳಿ, ಪಕ್ಕದೂರಿನಲ್ಲಿ ಗಣೇಶ್ ಸ್ಟೋರ್ಸ್ ನನ್ನ ಅಕ್ಕನವರದ್ದು ಅಲ್ಲಿ ಹೋಗಿ ಸಾವಿತ್ರಿ ಕೈಯಯಲ್ಲಿ ಪತ್ರ ಬರೆಯಿಸಿ, ಅವನನ್ನು ಕರೆಯಿಸಿ " ಅಂದಳು.
ನಾನು ಆ ಕಾರ್ಯ  ಮಾಡುತ್ತೇನೆ ಎಂದು ಅವಳಲ್ಲಿ ಹೇಳಿದೆ, ಅಷ್ಟರಲ್ಲೇ ಇನ್ಸ್ಪೆಕ್ಟರ್ ನೊಂದಿಗೆ ಮಾತಾಡುತ್ತಿದ್ದ ವಕೀಲ ನಮ್ಮೆಜಮಾನರು ಬಂದರು, ಮೀನಾಕ್ಷಿ ಅಂದರೆ ಅವರಿಗೂ ಅಭಿಮಾನ ಅವರು ಅವಳಲ್ಲಿ "ಚಿಂತೆ ಮಾಡಬೇಡ ಅಮ್ಮ , ಸಾಕ್ಷಿ ಪ್ರಭಾಲವಾಗಿದೆ , ಆದರೆ ಸಂಧರ್ಭವನ್ನು ಜಡ್ಜ್ ಗೆ ಮನವರಿಕೆ ಮಾಡಿಸಿ ನಿನ್ನ ಶಿಕ್ಷೆ ಕಮ್ಮಿ ಮಾಡಿಸುತ್ತೇನೆ "ಅಂದರು.
 
ಅವಳಿಗೆ ಸಮಾಧಾನ ಪಡಿಸಿ ನಾನೂ ಯಜಮಾನ್ರು ಮನೆಗೆ ಬಂದೆವು, ಸಂಜೆ ಪಕ್ಕದೂರಿಗೆ ಹೋಗಿ ಅವಳು  ನನ್ನಲ್ಲಿ ಹೇಳಿದ ಕೆಲಸವನ್ನು ಮಾಡಿದೆ, ಸಾವಿತ್ರಿ ನನ್ನ ಸ್ಟುಡೆಂಟ್ ಆದಕಾರಣ ಅವಳನ್ನು ನಾನು ಮನೆಯಿಂದ ಹೊರಗೆ ಕರೆದು ಏಕಾಂತದಲ್ಲಿ ಬೇಟಿ ಮಾಡಿ ಎಲ್ಲ ವಿಚಾರ ಅವಳಲ್ಲಿ ಹೇಳಲು ಸಫಲಳಾದೆ,ಅವಳ ಕೈಯಿಂದ ಪತ್ರ ಬರೆದು ಪೋಸ್ಟ್ ಮಾಡಿಸಿಯೂ ಆಯಿತು.

ಪತ್ರ ೨ ದಿನದಲ್ಲೇ ತಲುಪಿರಬಹುದು, ಮೀನಾಕ್ಷಿಯ ಆಸೆಯಂತೆ ಅವಳ  ಅಕ್ಕನ ಮಗ ಇವತ್ತು ಕೆಲಸ ನಿರ್ವಹಿಸಲು ಬಂದಿರಲು ಬಹುದು"

ಬಸ್ ಡ್ರೈವರ್ ಹಾಕಿದ ಬ್ರೇಕ್ ಗೆ ಅವಳ ಕಥೆ ನಿಂತಿತು, ತೊಡೆಯಲ್ಲಿದ್ದ ವಸುಂದರ ಎದ್ದಳು, ಬಸ್  ಆಗಲೇ ಊರು ತಲುಪಿತ್ತು.ಮುಂದಿನ ಭಾಗ 

2 comments:

 1. ಹದಿ ಹರೆಯದ ಪ್ರಾಯದಲ್ಲಿ ಆಗುವ ಪ್ರೀತಿಯನ್ನ ,ಮನೆಯವರಿಗೆ ಆಗುವ ಪರಿಣಾಮವನ್ನ ಚೆನ್ನಾಗಿ ಬಿಂಬಿಸಿದ್ದೀರಾ,ಸಾಮಾನ್ಯರಿಗೆ ಅರ್ಥ ಆಗುವಂತಹ ಮಾತುಗಳು .ತುಂಬಾ ಚೆನ್ನಾಗಿದೆ ಕಾಮತರೆ ನಿಮ್ಮ ಕಥೆ ,ಹೀಗೆಯೇ ಮುಂದುವರೆಸಿ ನಿಮ್ಮ ಉಳಿದ ಭಾಗವನ್ನು
  ನಿಮ್ಮಲ್ಲಿ ಒಳ್ಳೆಯ ಕಾದಂಬರಿಕಾರ ನಾಗುವ ಲಕ್ಷಣ ಗಳು ಇದ್ದಾವೆ ,ನೀವು ಕನ್ನಡದ ಮರೆಯಲಾಗದ ಕಂದ ಅಗೀರಿ ,ಅದೇ ನನ್ನ ಆಶಯ

  ReplyDelete
 2. ಪ್ರಮೋದ್ ನಿಮ್ಮ ನಿರಂತರ ಪ್ರೋತ್ಸಾಹಕ್ಕೆ ನಾನು ಋಣಿ. ಓದುಗಾರರಿರುವ ವರೆಗೂ ಬರೆಯುವವರು ಇದ್ದೆ ಇರುತ್ತಾರೆ.
  ಮೆಚ್ಚಿ ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು
  ನಿಮ್ಮ
  ಕಾಮತ್ ಕುಂಬ್ಳೆ

  ReplyDelete