Thursday, June 23, 2011

ಸ್ವಲ್ಪ ಇನ್ನೂ ಸ್ವಲ್ಪವೇ ಮನಸ ಕಾಡಿ ಹೋಗಬೇಕಿದೆ

ಬತ್ತಿ ಬರಡಾದ ಭಾವ ಸರೋವರದಿ ಸೆಲೆಯೊಂದು ಮೂಡಿದೆ  
ಸುತ್ತಿ ಒರಟಾದ ಜೀವ ವಾರಿಧಿಯಲಿ ಅಲೆಯೊಂದು ಮೂಡಿದೆ  
ಮನದ ಪುಟದಲ್ಲಿ ರಂಗಿಡುತ್ತಿದ್ದ ನಿನ್ನ ಕಲ್ಪನೆ ಇಂದು ನಿಜವೆನಿಸಿದೆ
ನನ್ನುಸಿರೋಳು ನಿನ್ನುಸಿರಿನ ಸುಳಿವು ಮೆಲ್ಲನೆ ಬಂದು ಮಜವೆನಿಸಿದೆ


ಸ್ವಲ್ಪ ಇನ್ನೂ ಸ್ವಲ್ಪವೇ ಮನಸ ಕಾಡಿ ಹೋಗಬೇಕಿದೆ ಇನ್ನು ನೀನು
ಮೆಲ್ಲನೆ ಇನ್ನೂ ಮೆಲ್ಲನೆ ಕನಸ ಲೂಟಿ ಮಾಡಬೇಕಿದೆ ಇನ್ನು ನೀನು ||

ನಿನ್ನ ಕಣ್ಣ ಬಿಂಬದಿ ಚಂದಿರ ಅವಿತು ಕುಳಿತಾಗಿದೆ
ಮೊಗ್ಗು ಬಿರಿವ ಹೊತ್ತಲಿ ತಾವರೆ ತಾನಾಗೆ ನಲುಗಿರುವುದು ಸಿಗದೆ ಕಾರಣ.
ಬಣ್ಣ ಅಂಬರದಿ ಚಂದಿರನಿಲ್ಲದೆ ತಿಳಿಯಾಗಿದೆ 
ನಿನ್ನ ಕಣ್ಣ ರೆಪ್ಪೆಯ ಹೊಸ್ತಿಲಲಿ ಮಗಾಡೆ ಮಲಗಿರುವುದು ಅರಸಿ ಬಂದ ತಾರೆಯ ದಿಬ್ಬಣ||ಸ್ವಲ್ಪ ಇನ್ನೂ ಸ್ವಲ್ಪವೇ ||


ನಿನ್ನ ನೀಳ ಕೇಶರಾಶಿಯಲಿ ಕಸ್ತೂರಿ ಸೆರೆಯಾಗಿದೆ
ವರ್ಷ ಋತುವಿನ ಮಧುರ ಗಂಧದಿ ಪುನೀತ ವಾತಾವರಣ
ಪಾರಿಜಾತ ಕಂಪ ಅರಸಿ ಸುತ್ತೂರು ಅಲೆದಾಡಿದೆ
ಸೇರುತ ನಿನ್ನ ಮುಂಗುರುಳ ನಸುನಗುತ ಅಲಿಂಗಿಸಿ ಕಟ್ಟಿದೆ ತೋರಣ ||ಸ್ವಲ್ಪ ಇನ್ನೂ ಸ್ವಲ್ಪವೇ ||


ನಿನ್ನ ಕೊರಳ ಗರ್ಭದ ಕೊಳವೆ ಕೊಳಲಾಗಿದೆ
ಆ ಇಂಪಿನ ದನಿಯಲ್ಲೇ ತೂಗಿಹ ಕೋಗಿಲೆಯ ವಶೀಕರಣ
ಸಾಲೋಳು ಹೊರಟ ಭಾವ ಪರ್ವದ ಕಳೆ ತಂದಿದೆ 
ಮೌನದ ಮನೆಯಲ್ಲೇ ಕೂತಿಹ ಭಾವ ನೈದಿಲೆಯ  ಅನಾವರಣ ||ಸ್ವಲ್ಪ ಇನ್ನೂ ಸ್ವಲ್ಪವೇ ||

1 comment:

  1. ಸು೦ದರ, ಅರ್ಥಗರ್ಭಿತ ಕವನ ಕಾಮತರೆ.

    ReplyDelete