Saturday, May 28, 2011

ಗೆಳೆಯನೇ ಇನ್ನು ನೀನು ಬರಿಯ ನೆನಪು....






ಉದಯರವಿ ಪಡುವಣ ತೀರದಲಿ ಕರಗದೇ 
ಇಹ ತೊರೆದು ನಡುದಾರಿಯಲಿ ಮರೆಯಾದೆ
ನೆನಪ ಜೋಳಿಗೆಯಲಿ ಬಚ್ಚಿಟ್ಟು ತನ್ನ ಕಣ್ಣಿರ 
ನಗು ಮೊಗದಿ ನಗುನಗುತಲಿ ತೇಲಿಹೋದೆ


ನಾವಿಕನ ಆಟಕೆ ಒಂಟಿಯಾಗಿದೆ ದೋಣಿಯು 
ಪಯಣಿಕನಿಗೆ ಯಾರ ಆಸರೆ ನಡುನೀರಿನೋಳು 
ಬಂಧಿಪಂಜರದ ಉತ್ಸಾಹ ಮರೆಯಾಗಿದೆ ಇಂದು 
ಹೊರಟ ಗಿಳಿಯು ಯಾವ ಗೂಡು ಸೇರಿಹುದೋ ಎಂದು


ಹೆಗಲಾಗುವ ಮೊದಲೇ ಹೆಗಲೇರಿ ಮಲಗಿರುವುದು 
ಅಂದು ಹೆಗಲೇರಿ ಕುಣಿದಿದ್ದ ಕೂಸು,ಕೊನೆಯ ಪಯಣಕೆ ಇಂದು 
ಪಂಚಭೂತಗಳು ಕರೆಯುತಿವೆ ಪಂಚೇಂದ್ರಿಯಗಳನು 
ಬಂಧನವ ತೊರೆಯಲಾದೀತೇ ಹಳೆಯ ಋಣಕೆ


ಹನಿಯಿಡುವ ಕಣ್ಣಿಗೆ ಸಾಂತ್ವನ ಕೊಡುತಲಿದೆ
ಇನ್ನೊಂದು ಕೊರಗುವ ಮನಸು
ಪುತ್ರತ್ವ,ಭ್ರಾತತ್ವ, ಮಿತ್ರತ್ವ ಚಿತೆ ಸೇರಿ ಉರಿಯುತಿದೆ 
ಗೆಳೆಯನೇ ಇನ್ನು ನೀನು ಬರಿಯ ನೆನಪು


ಮನುಜಪಯಣ ಬಾಲ್ಯದಿಂದ ಗಮ್ಯದೆಡೆಗೆ 
ಉಸಿರಿಗೆ ಹೆಸರು ನಡುವೆಲ್ಲ, ಹೆಸರೇ ಉಸಿರು ಕೊನೆಗೆ 
ನಿಜಪಯಣ ಶೂನ್ಯದಿಂದ ಶೂನ್ಯದೆಡೆಗೆ 
ಅಲ್ಪವಿರಾಮ ನಡುವೆಲ್ಲ, ಪೂರ್ಣವಿರಾಮ ಕೊನೆಗೆ






ಕಾಮತ್ ಕುಂಬ್ಳೆ

1 comment: